

ಹೊಸಪೇಟೆ: ಕುಲಕಸಬುಗಳನ್ನೇ ಆಧರಿಸಿ ಜೀವನ ಕಟ್ಟಿಕೊಂಡಿರುವ ಅಲೆಮಾರಿ ಸಮುದಾಯಗಳಿಗೆ ಶಾಶ್ವತ ನೆಲೆ ಕಲ್ಪಿಸಿ ಟೆಂಟ್ ಮುಕ್ತ ಜಿಲ್ಲೆಯನ್ನಾಗಿಲು ಜಿಲ್ಲಾಡಳಿತ ಮೊದಲ ಆದ್ಯತೆ ನೀಡಬೇಕು ಎಂದು ಎಸ್ಸಿ-ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಲೆಮಾರಿ ಸಮುದಾಯಗಳ ಅಹವಾಲು ಸ್ವೀಕಾರ ಮತ್ತು ನಿಗಮದಿಂದ ಜಾರಿಯಾದ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಜನಾಂಗದವರು ಒಟ್ಟು 40675 ಜನಸಂಖ್ಯೆಯಿದ್ದು, ಅದರಲ್ಲಿ 1497 ನಿವೇಶನ ರಹಿತ ಹಾಗೂ 1524 ವಸತಿ ರಹಿತ ಕುಟುಂಬಗಳಿವೆ. ಜಿಲ್ಲಾಡಳಿತದ ಸಹಕಾರದೊಂದಿಗೆ ವಸತಿ ಮತ್ತು ನಿವೇಶನ ರಹಿತರಿಗೆ ಸರ್ಕಾರಿ ನಿವೇಶನಗಳನ್ನು ಕಾಯ್ದಿರಿಸಿ ಅರ್ಹ ಫಲಾನುಭವಿಗಳಿಗೆ ವಿತರಿಸುವ ಕಾರ್ಯವಾಗಬೇಕಿದೆ. ಅಲೆಮಾರಿ ಕುಟುಂಬಗಳ ಮಕ್ಕಳು ಶಿಕ್ಷಣ ವಂಚಿತರಾಗದAತೆ ಜಾಗೃತಿ ಮೂಡಿಸಬೇಕು. ಜಿಲ್ಲೆಯ ಎಲ್ಲಾ ವಸತಿ ಶಾಲೆಗಳಲ್ಲಿ ಶೇ.10 ರಷ್ಟು ಮೀಸಲಾತಿ ಕಲ್ಪಿಸಿ ಅವಕಾಶ ನೀಡಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರೇ ಸಮುದಾಯ ಮುಖ್ಯವಾಹಿನಿ ಬರಲು ಸಾಧ್ಯವಿದೆ ಎಂದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಪಂ ಯೋಜನಾ ನಿರ್ದೇಶಕ ಜೆ.ಎಂ.ಅನ್ನದಾನಸ್ವಾಮಿ, ಎಎಸ್ಪಿ ಟಿ.ಮಂಜುನಾಥ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ.ಕಾಳೆ ಇತರರಿದ್ದರು.