

ಹೊಸಪೇಟೆ: ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿಯ ಕಡ್ಡಾಯ ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಸ್.ಎಫ್.ಐ. ಜಿಲ್ಲಾ ಸಹ ಕಾರ್ಯದರ್ಶಿ ಕೆ.ಎ.ಪವನ್ ಕುಮಾರ್ ಒತ್ತಾಯಿಸಿದ್ದಾರೆ.
ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರುವ ಅವರು, ಇತ್ತೀಚಿನ ದಿನಗಳಲ್ಲಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುವ ಬೆಳವಣಿಗೆ ಹೆಚ್ಚು ಸಂಭವಿಸುತ್ತಿದೆ. ಇದರಿಂದ ಲಕ್ಷಾಂತರ ಅಭ್ಯರ್ಥಿಗಳಿಗೆ ಅಘಾತ ಉಂಟು ಮಾಡಿದೆ. ಇದರ ನಡುವೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿಯ ಕಡ್ಡಾಯ ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಪರೀಕ್ಷಾರ್ಥಿಗಳಿಂದ ದೂರು ನೀಡಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯ ಕನ್ನಡ ಪತ್ರಿಕೆ ಸೀಲ್ ಓಪನ್ ಮಾಡಿದ ಪ್ರಶ್ನೆ ಪತ್ರಿಕೆ ಹಂಚಿಕೆ ಮಾಡಲಾಗಿದೆ ಎಂದು ಕೆಲವು ಪರೀಕ್ಷಾರ್ಥಿಗಳು ಪರೀಕ್ಷಾ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಬೀದರ್ ಜಿಲ್ಲಾ ಕೇಂದ್ರದಲ್ಲಿನ ದತ್ತಗಿರಿ ಕಾಲೇಜಿನ ಪರೀಕ್ಷೆ ನಡೆಸಲಾಗುತ್ತಿದ್ದ ಕೇಂದ್ರದಲ್ಲಿ ಈ ಎಡವಟ್ಟು ಸಂಭವಿಸಿದೆ. ನಿಯಾಮಾನುಸಾರ ಪ್ರಶ್ನೆ ಪತ್ರಿಕೆ ಬಂಡಲ್ ತೆರೆದಿಲ್ಲ. ಜತೆಗೆ, ಪ್ರಶ್ನೆ ಪತ್ರಿಕೆಯ ಸೀಲ್ ಕೂಡ ಓಪನ್ ಆಗಿತ್ತು ಎಂದು ದೂರಿದ್ದಾರೆ. ಯಾರೋ ಇದನ್ನು ಸೋರಿಕೆ ಮಾಡಿದ್ದಾರೆ ದೂರಿನಲ್ಲಿ ಆರೋಪ ಮಾಡಿದ್ದಾರೆ. ಇದು ಇಲಾಖೆ ವೈಫಲ್ಯವಾಗಿದೆ ಎಂದು ಆಗ್ರಹಿಸಿದರು.
ಕಿಡಿಗೇಡಿಗಳು ಮಾಡುವ ಕೆಲಸದಿಂದ ರಾಜ್ಯದ ಬೊಕ್ಕಸಕ್ಕೆ ಮತ್ತು ಪರೀಕ್ಷಾ ಅಭ್ಯರ್ಥಿಗಳಿಗೆ ಲಕ್ಷಾಂತರ ರೂಪಾಯಿ ಹಣ ಮತ್ತು ಸಮಯವು ನಷ್ಟವಾಗುತ್ತಿದೆ. ಇನ್ನೊಂದೆಡೆ ಕೋಚಿಂಗ್ ಸೆಂಟರ್‌ಗಳು ತರಬೇತಿ ನೀಡುವ ಹೆಸರಿನಲ್ಲಿ ಲಕ್ಷಗಟ್ಟಲೆ ಹಣ ಲೂಟಿ ಮಾಡುವ ದಂಧೆಯಲ್ಲಿ ತೊಡಗಿಕೊಂಡಿವೆ. ಆದರೂ, ಸರ್ಕಾರ ಮೌನವಹಿಸಿದೆ. ದಂಧೆಕೋರರ ಲಾಭಕ್ಕೆ ರಾಜ್ಯದ ಯುವಕರ ಭವಿಷ್ಯವನ್ನು ಹಾಳುಮಾಡುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇನ್ನು ಮುಂದೆ ಈ ಘಟನೆಗಳು ನಡೆಯದಂತೆ ಎಚ್ಚರಿಕೆ ಸರ್ಕಾರ ವಹಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.