ಎನ್‌ಇಪಿ ಸಮರ್ಪಕ ಅನುಷ್ಠಾನಕ್ಕೆ ಸಹಕಾರ ಅಗತ್ಯ: ವಿಎಸ್‌ಕೆ ವಿವಿ ಕುಲಪತಿ ಪ್ರೊ.ಸಿದ್ದು ಅಲಗೂರ ಹೇಳಿಕೆ

Hospete national Education Policy 2020 Workshop
ಹೊಸಪೇಟೆಯ ಶ್ರೀ ಶಂಕರ್ ಆನಂದ ಸಿಂಗ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಸಿದ್ದು ಪಿ. ಅಲಗೂರ ಉದ್ಘಾಟಿಸಿದರು.
Published on

ಹೊಸಪೇಟೆ: ದೇಶದಲ್ಲಿ ಮೊಟ್ಟ ಮೊದಲು ನೂತನ ಶಿಕ್ಷಣ ನೀತಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ರಾಜ್ಯಕ್ಕಿದ್ದು, ಸಮರ್ಪಕ ಅನುಷ್ಠಾನಕ್ಕೆ ಕಾಲೇಜುಗಳ ಪ್ರಾಚಾರ್ಯರು, ಪ್ರಾಧ್ಯಾಪಕರ ಸಹಕಾರ ಅಗತ್ಯ ಎಂದು ಬಳ್ಳಾರಿಯ ವಿಎಸ್‌ಕೆ ವಿವಿ ಕುಲಪತಿ ಪ್ರೊ.ಸಿದ್ದು ಪಿ. ಅಲಗೂರ ಹೇಳಿದರು.

ನಗರದ ಶ್ರೀ ಶಂಕರ್ ಆನಂದ ಸಿಂಗ್ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿಎಸ್‌ಕೆ ವಿವಿ ಸಹಯೋಗದೊಂದಿಗೆ ಆಂತರಿಕ ಭರವಸೆ ಕೋಶದಿಂದ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 34 ವರ್ಷಗಳ ಬಳಿಕ ಶಿಕ್ಷಣ ನೀತಿಯಲ್ಲಿ ಬದಲಾವಣೆ ತರಲಾಗಿದೆ. ಇದರ ಉದ್ದೇಶವೇ ಜಾಗತಿಕ ಜ್ಞಾನ ಪಡೆಯುವುದಾಗಿದೆ. ಬಡಮಕ್ಕಳಿಗೂ ಉನ್ನತ ಮಟ್ಟದ, ಕೌಶಲಯುತ ಶಿಕ್ಷಣ ದೊರೆಯಲಿದೆ. ಇಲ್ಲಿಯವರೆಗೆ ನಾವು ಜ್ಞಾನದ ದೃಷ್ಟಿಯಿಂದ ಶಿಕ್ಷಣ ಪಡೆಯುತ್ತಿದ್ದೆವು. ಆದರೆ ಈಗ ತರಬೇತಿ ಜತೆಗೆ ಕೌಶಲಯುತ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ. ಪದವಿಯಲ್ಲಿ ವಿದ್ಯಾರ್ಥಿಗಳು ಇಷ್ಟವಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಅವಕಾಶವಿದೆ ಎಂದರು.

ವಿಎಸ್‌ಕೆ ವಿವಿ ರಾಷ್ಟ್ರೀಯ ಶಿಕ್ಷಣ ನೀತಿಯ ನೋಡಲ್ ಅಧಿಕಾರಿ ಪ್ರೊ.ಬಸವರಾಜ ಬೆಣ್ಣಿ ಮಾತನಾಡಿ, ಐದು ವರ್ಷಗಳ ಎನ್‌ಇಪಿ ಸಾಧಕ, ಬಾಧಕಗಳ ಕುರಿತು ಚರ್ಚಿಸಿ ವರದಿ ಸಿದ್ಧಪಡಿಸಿದ್ದರ ಫಲವಾಗಿ ಹೊಸ ನೀತಿ ಜಾರಿಯಾಗಿದೆ. ಜ್ಞಾನದ ಜತೆಗೆ ಕೌಶಲ ಬೆಳೆಸುವುದು ಹೊಸ ಶಿಕ್ಷಣ ನೀತಿಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ.ಕನಕೇಶಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಇಪಿ ಸಂಚಾಲಕ ಪಾಟೀಲ್ ನಟರಾಜ್, ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಸುಂಡಿ ಬಿ.ನಾಗರಾಜ್ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net