

ಹೊಸಪೇಟೆ: ನಗರದ ತಾಯಿ ಮತ್ತು ಮಕ್ಕಳ ಸರ್ಕಾರಿ (ಎಂಎಸಿಎಚ್) ಆಸ್ಪತ್ರೆಯಲ್ಲಿ ಚೊಚ್ಚಲ ಹೆರಿಗೆಯಾಗಿದ್ದ ನಾಲ್ಕು ದಿನದ ಬಾಣಂತಿ ಬುಧವಾರ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹಗರಿಬೊಮ್ಮನಹಳ್ಳಿ ದಶಮಾಪುರ ಗ್ರಾಮದ ಶಾಂತಾ (25) ಗಂಡ ಮಹೇಶ್ ಮೃತಪಟ್ಟ ಬಾಣಂತಿ. ಚೊಚ್ಚಲ ಹೆರಿಗೆ ಹಿನ್ನೆಲೆ ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮದ ತಾಯಿ ಮನೆಗೆ ಶಾಂತಾ ಮೊದಲ ಹೆರಿಗೆಗೆ ಬಂದಿದ್ದರು. ಇವರ ತಾಯಿ ರತ್ನಮ್ಮ ಆಶಾ ಕಾರ್ಯಕರ್ತೆಯಾಗಿದ್ದು, ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಗರದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಏ.20ರಂದು ಬೆಳಗ್ಗೆ 9.30ರ ಹೊತ್ತಿಗೆ ವೈದ್ಯೆ ಡಾ. ಸಿಂಧು ಸಿಜೇರಿಯನ್ ಹೆರಿಗೆ ಮಾಡಿಸಿದ್ದರು. ಬಳಿಕ ವೈದ್ಯೆ ಸಿಂಧು ಹಾಗೂ ಸ್ಟಾಫ್ ನರ್ಸ್ ರಾಘವೇಂದ್ರ ತಪಾಸಣೆ ನಡೆಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸ್ವತಃ ಆಶಾ ಕಾರ್ಯಕರ್ತೆಯಾದ ರತ್ನಮ್ಮ ತಪಾಸಣೆ ನಡೆಸಲು ಗೊಗರೆದರೂ ನಿರ್ಲಕ್ಷ್ಯವಹಿಸಲಾಗಿದೆ. ಹೆರಿಗೆಯಾಗಿ ನಾಲ್ಕು ದಿನಗಳು ಕಳೆದರೂ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಹಾಗಾಗಿ ತನ್ನ ಪುತ್ರಿ ಶಾಂತಾ ಮೃತಪಟ್ಟಿದ್ದಾರೆ ಎಂದು ರತ್ನಮ್ಮ ಆಸ್ಪತ್ರೆ ಎದುರು ರೋದಿಸಿದರು. ನಾವು ಆಶಾ ಕಾರ್ಯಕರ್ತೆಯಾಗಿ ಹಲವು ಹೆರಿಗೆಗಳನ್ನು ಮಾಡಿಸಿರುವೆ. ಆದರೆ, ಈ ರೀತಿ ವೈದ್ಯರು ಹಾಗು ಸ್ಟಾಫ್ ನರ್ಸ್ ನಿರ್ಲಕ್ಷ್ಯ ವಹಿಸಿದ್ದಾರೆ. ಕನಿಷ್ಠ ಬಿಪಿ ಕೂಡ ಚೆಕ್ ಮಾಡಲಿಲ್ಲ, ಕಾಲ ಕಾಲಕ್ಕೆ ಬಿಪಿ ಚೆಕ್ ಮಾಡಿದರೂ ನನ್ನ ಮಗಳು ಉಳಿದುಕೊಳ್ಳುತ್ತಿದ್ದಳು ಎಂದರು.
ನನ್ನ ಮಗಳಿಗೆ ಸಿಜೇರಿಯನ್ ಹೆರಿಗೆ ಮಾಡಿಸಲು ಐದು ಸಾವಿರ ರೂ. ತೆಗೆದುಕೊಂಡರು. ಸ್ವತಃ ಸಿಂಧು ಮೇಡಂ ಕೈಯಲ್ಲೇ ಕೊಟ್ಟಿರುವೆ. ನಾಲ್ಕು ಸಾವಿರ ರೂ. ಕೊಡಲು ಹೋದಾಗ ಬೇಡ ಎಂದರೂ, ಹಾಗಾಗಿ ಮಗಳು ಚನ್ನಾಗಿರಲಿ ಎಂದು ಐದು ಸಾವಿರ ರೂ. ಕೊಟ್ಟೆ, ಹಣ ಕೊಟ್ರೂ ಹೆರಿಗೆಯಾಗಿ ನಾಲ್ಕುದಿನ ಕಳೆದರೂ, ಸಿಂಧು ಡಾಕ್ಟರ್, ಸ್ಟಾಫ್ ನರ್ಸ್ ರಾಘವೇಂದ್ರ ಬ್ರದರ್ ಒಮ್ಮೆಯೂ ಬಂದು ನೋಡಲಿಲ್ಲ. ಅವರು ಬಂದು ನೋಡಿದ್ರ್ ನನ್ನ ಮಗಳು ಉಳಿಯುತ್ತಿದ್ದಳು" ಎಂದು ರತ್ನಮ್ಮ ದೂರಿದರು.
ಈ ಆಸ್ಪತ್ರ‍್ಯಾಗ್ ದುಡ್ಡು ಕೊಟ್ರೂ, ನನ್ನ ಮಗಳನ್ನು ಉಳಿಸಲು ಆಗಲಿಲ್ಲ. ಒಮ್ಮೆಯೂ ಡಾಕ್ಟುç ಬಂದು ನೋಡಲಿಲ್ಲ. ನನ್ನ ಮೊಮ್ಮಗಳಿಗೆ ಮಕ್ಕಳ ಡಾಕ್ಟುç ಬಂದು ನೋಡುತ್ತಿದ್ರು. ಆದ್ರ್, ನನ್ನ ಮಗಳು ಶಾಂತಾಳಿಗೆ ನೋಡಲು ಸಿಂಧು ಡಾಕ್ಟರ್ ಬರಲೇ ಇಲ್ಲ. ಕೇಳಿದ್ರ ರಜೆಯಲ್ಲಿ ಇದ್ದಾರೆ ಎಂದು ಸ್ಟಾಫ್ ನರ್ಸ್ ಹೇಳಿದರು. ದುಡ್ಡು ಕೊಟ್ರೂ ನೋಡದ್ ಸರ್ಕಾರಿ ಆಸ್ಪತ್ರೆಯ್ಯಾಗ್ ಯಾರೂ ಬರಬಾರ್ದು. ನಾನು ಆಶಾ ಕಾರ್ಯಕರ್ತೆಯಾಗಿ ಹೇಳುತ್ತಿರುವೆ. ಖಂಡಿತ ಯಾರೂ ಬರಬೇಡಿ ಎಂದು ತಾಯಂದರಿಗೆ ಹೇಳುವೆ ಎಂದು ರತ್ನಮ್ಮ ಭಾವುಕರಾದರು.
ಬಾಣಂತಿ ಶಾಂತಮ್ಮ ಸಾವಿನ ಮುನ್ನ ಎರಡು ಇಡ್ಲಿ ಸೇವಿಸಿದರು. ಸೇವಿಸಿದ ಬಳಿಕ ಸ್ವಲ್ಪ ಹೊತ್ತು ನಿದ್ರೆಗೂ ಜಾರಿದ್ದರು. ಎದ್ದ ಬಳಿಕ ನೀವು ನನಗೆ ಇಬ್ಬಿಬ್ಬರು ಕಾಣುತ್ತಿದ್ದೀರಿ ಎಂದು ಹೇಳಿದ ತಕ್ಷಣವೇ ಬಿಪಿ ಚೆಕ್ ಮಾಡಿ ಎಂದು ರತ್ನಮ್ಮ ಗೋಳಾಡಿದಾರೆ. ಆಗಲು ವೈದ್ಯರು ಹಾಗೂ ನರ್ಸ್ಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ರತ್ನಮ್ಮ ದೂರಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ವೈದ್ಯರ ನಿರ್ಲಕ್ಷ್ಯದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆ ವೈದ್ಯೆ ಡಾ.ಸಿಂಧು ಹಾಗೂ ಸ್ಟಾಫ್ ನರ್ಸ್ ರಾಘವೇಂದ್ರ ಎಂಬವರನ್ನು ಡಿಎಚ್‌ಒ ಡಾ.ಎಲ್.ಆರ್.ಶಂಕರ ನಾಯ್ಕ ಅವರು ಸೇವೆಯಿಂದ ವಜಾಗೊಳಿಸಿ ಆದೇಶಿಸಿದ್ದಾರೆ.
ಬಾಣಂತಿ ಶಾಂತಾ ಅವರಿಗೆ ಏ.20ರಂದು ಸಿಜೇರಿಯನ್ ಹೆರಿಗೆಯನ್ನು ಡಾ. ಸಿಂಧು ಮಾಡಿಸಿದ್ದಾರೆ. ಆ ಬಳಿಕ ತಪಾಸಣೆ ನಡೆಸಿಲ್ಲ ಎಂಬ ಆರೋಪ ಇದೆ. ವೈದ್ಯೆ ಸಿಂಧು ಹಾಗೂ ಸ್ಟಾಫ್ ನರ್ಸ್ ರಾಘವೇಂದ್ರ ನಿರ್ಲಕ್ಷö್ಯವಹಿಸಿರುವುದು ಪ್ರಾಥಮಿಕ ತನಿಖೆ ವೇಳೆ ಕಂಡು ಬಂದಿದೆ. ಹಾಗಾಗಿ ಈಗ ಇವರಿಬ್ಬರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಸಾವಿನ ಮುನ್ನ ಮೂರ್ಚೆ ಬಂದಿದ್ದು, ಪೋಸ್ಟ್ ಮಾರ್ಟಂ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಡಾ.ಎಲ್.ಆರ್. ಶಂಕರ ನಾಯ್ಕ, ಡಿಎಚ್‌ಒ, ವಿಜಯನಗರ.