

ಹೊಸಪೇಟೆ: ನಗರ ಸೇರಿದಂತೆ ಜಿಲ್ಲೆಯಲ್ಲಿ ನಾಗರ ಪಂಚಮಿಯನ್ನು ಶುಕ್ರವಾರ ಸಂಭ್ರಮದಿAದ ಆಚರಿಸಲಾಯಿತು.
ಬುಕ್ಕಸಾಗರ ಏಳು ಹೆಡೆ ನಾಗಪ್ಪ ದೇವಸ್ಥಾನ ಸೇರಿದಂತೆ ಇತರೆ ದೇವಸ್ಥಾನಗಳಲ್ಲಿನ ಅರಳಿಕಟ್ಟೆಯಲ್ಲಿರುವ ನಾಗ ವಿಗ್ರಹಕ್ಕೆ ಜನರು ಕುಟುಂಬ ಸಮೇತವಾಗಿ ಬಂದು ಹಾಲೆರೆದರು. ಹಬ್ಬದ ನಿಮಿತ್ತ ಜನರು ನಿವಾಸಿಗಳು ಸಿಹಿ ತಿನಿಸುಗಳನ್ನು ತಯಾರಿಸಿ ಹುತ್ತಕ್ಕೆ ಹಾಗೂ ನಾಗರಕಟ್ಟೆಗಳಿಗೆ ತೆರಳಿ ನಾಗರ ದೇವರಿಗೆ ಸಿಹಿ ಉಂಡೆಗಳನ್ನು ಸಮರ್ಪಿಸಿದರು. ಮಕ್ಕಳು, ಮಹಿಳೆಯರು ನಾಗರಕಟ್ಟೆಗೆ ಆಗಮಿಸಿ ಹಾಲೆರದರು. ಕುಟುಂಬದ ಸದಸ್ಯರೆಲ್ಲರೂ ಸಂಭ್ರಮದಿAದ ಹಬ್ಬವನ್ನು ಆಚರಿಸಿದರು.
ನಗರದ ರಾಣಿಪೇಟೆಯ ನಾಗರ ಕಟ್ಟೆ, ಅಮರಾವತಿಯ ನಾಗರಕಟ್ಟೆ, ಪಟೇಲ್‌ನಗರದ ನಾಗರಕಟ್ಟೇ ಸೇರಿದಂತೆ ನಗರದ ನಾನಾ ಕಡೆಯ ನಾಗರಕಟ್ಟೆಗಳಲ್ಲಿ ಹಾಲು ಎರೆಯಲಾಯಿತು. ಭಕ್ತರು ಪೂಜ್ಯಭಾವನೆಯಿಂದ ಆಗಮಿಸಿ ತಮ್ಮ ಭಕ್ತಿಯನ್ನು ಮೆರೆದರು. ನಗರದ ಶ್ರೀಗೋಪಾಲಕೃಷ್ಣ ಸ್ವಾಮಿ ದೇಗುಲ, ವಡಕರಾಯ ದೇಗುಲ, ನೀಲಕಂಠೇಶ್ವರ, ಮಾರ್ಕಂಡೇಶ್ವರ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಬೆಳಗ್ಗೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು. ಯುವಕರು ರಸ್ತೆಯಲ್ಲಿ ನಿಂಬೆ ಹಣ್ಣು ಎಸೆಯುವ ಆಟ ಆಡಿದರು. ಇನ್ನು ಕೆಲವರು ಮರದಲ್ಲಿ ಹಗ್ಗ ಕಟ್ಟಿ ಜೋಕಾಲಿ ಆಡಿದರು.
ವಿಶೇಷ ಪೂಜೆ: ತಾಲೂಕಿನ ಬುಕ್ಕಸಾಗರದ ಐತಿಹಾಸಿಕ ಏಳು ಹೆಡೆ ನಾಗಪ್ಪ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೇ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ನಾಗಪ್ಪ ವಿಗ್ರಹಕ್ಕೆ ಹಾಲೆರೆಯುವ ಅವಕಾಶ ಕಲ್ಪಿಸಲಾಗಿತ್ತು. ದೇವಸ್ಥಾನಕ್ಕೆ ಬಹಳಷ್ಟು ಭಕ್ತರು ಭೇಟಿ ನೀಡಿದರು. ದೇವಸ್ಥಾನದ ಇಒ ಹನುಂಮತಪ್ಪ ಇದ್ದರು.