ಲೋಕಾರ್ಪಣೆಗೆ ಸಿದ್ಧ ಕಮಲಾಪುರ ನೂತನ ಪುರಸಭೆ ಕಚೇರಿ

oplus_2048
oplus_2048
Published on

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯ ಹೆಬ್ಬಾಗಿಲು ಎಂದು ಹೇಳಲಾಗುವ ತಾಲೂಕಿನ ಕಮಲಾಪುರ ಪುರಸಭೆಯ ನೂತನ ಕಚೇರಿ ಕಟ್ಟಡ ಕಾಮಗಾರಿಯು ಇದೀಗ ಬಹುತೇಕ ಪೂರ್ಣಗೊಂಡಿದ್ದು, ಅಕ್ಟೋಬರ್ ತಿಂಗಳ ಮೊದಲ ವಾರ ಲೋಕಾರ್ಪಣೆ ಆಗಲಿದೆ. ಕಟ್ಟದಲ್ಲಿ ಹಂಪಿ ವಾಸ್ತುಶಿಲ್ಪದ ಸ್ಪರ್ಷ ನೀಡಲಾಗಿದೆ.

ಪಟ್ಟಣ ಪಂಚಾಯಿತಿಯಾಗಿದ್ದ ಕಮಲಾಪುರ 2022ರ ಎಪ್ರೀಲ್‌ನಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೆರಿ ಮೂರು ವರ್ಷ ಕಳೆಯುತ್ತಿದೆ. ಪುರಸಭೆಗೆ ಬೇಕಿರುವ 106 ಹುದ್ದೆಯ ಪೈಕಿ 16 ಅಧಿಕಾರಿಗಳು ಹಾಗೂ 27 ಸಿಬ್ಬಂದಿ ಇದ್ದಾರೆ. 20 ವಾರ್ಡ್ ಸದಸ್ಯರು, 3 ಜನ ನಾಮನಿರ್ದೇಶಿತ ಸದಸ್ಯರು ಇರಲಿದ್ದಾರೆ. ಪಟ್ಟಣದಲ್ಲಿ 30 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು 2400 ಚದುರ ಅಡಿಯಲ್ಲಿ ಪುರಸಭೆಯ ಕಚೇರಿ ನಡೆಯುತ್ತಿದೆ. ಪಾರ್ಕಿಂಗ್, ಆಸನದ ವ್ಯವಸ್ಥೆ ಸೇರಿ ಇತರೆ ಮೂಲಸೌರ್ಯದ ಕೊರತೆ ಇದೆ. ಆದ್ದರಿಂದ 2023ರಲ್ಲಿ ಪಟ್ಟಣದ ಹಂಪಿ ರಸ್ತೆಯ ಅಂಬೇಡ್ಕರ್ ವೃತ್ತದ ಬಲ ಭಾಗದಲ್ಲಿ ಒಂದು ಅಂತಸ್ತಿನ ನೂತನ ಕಚೇರಿ ನಿರ್ಮಾಣಕ್ಕೆ 1.80 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಯಿತು. ಅಂದಿನ ಪ್ರವಾಸೋದ್ಯಮ ಸಚಿವ ಆನಂದ್‌ಸಿAಗ್ ಕಾಮಗಾರಿಗೆ ಚಾಲನೆ ನೀಡಿದರು. ನೂತನ ಕಚೇರಿ ಕಟ್ಟಡ ಮುಂದುಗಡೆ ಹಂಪಿ ಸ್ಮಾರಕಗಳ ವಾಸ್ತುಶಿಲ್ಪದ ಮಾದರಿಯಲ್ಲಿ ಆಕರ್ಷಣೆಯಾಗುವಂತೆ ಕಟ್ಟದ ನಿರ್ಮಾಣವಾಗಿದೆ. ಕೆಲ ದಿನಗಳಲ್ಲಿ ವಿಶಾಲವಾದ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಅವಕಾಶ ದೊರೆಯಲಿದೆ ಎಂಬ ಸಂತಸ ಅಧಿಕಾರಿಗಳಲ್ಲಿದೆ.

ಯಾವ್ಯಾವ ಕಚೇರಿ?

ಒಂದು ಅಂತಸ್ತಿನ ಕಟ್ಟಡದಲ್ಲಿ ಮೊದಲನೇ ಮಹಡಿಯಲ್ಲಿ ಮುಖ್ಯಾಧಿಕಾರಿ, ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿಸಮಿತಿ ಕಚೇರಿಗಳು ಸೇರಿ ಕಂದಾಯ ವಿಭಾಗ, ಆಡಳಿತ ವಿಭಾಗ, ಸ್ವಾಗತ ಕಚೇರಿ, ಶೌಚಾಲಯ ಸೇರಿ ಇತರೆ ವಿಭಾಗಗಳಿಗೆ ಕಚೇರಿ ಇರಲಿದೆ. ಇನ್ನೂ ಮೊದಲನೇ ಮಹಡಿಯಲ್ಲಿ ಎಂಜಿನಿಯರ್ ವಿಭಾಗ, ಆರೋಗ್ಯ ವಿಭಾಗ ಇವು ಬಹುತೇಕ 180 ಚದುರ ಅಡಿಯ ಕಚೇರಿಗಳಿರಲಿವೆ. ಇನ್ನೂ 945 ಅಡಿ ವಿಸ್ತಿರ್ಣದಲ್ಲಿ ಸುಸಜ್ಜಿತ ಸಭಾಂಗಣ, ನಿರೀಕ್ಷಣಾ ಕೊಠಡಿ ಹಾಗೂ ಶೌಚಾಲಯ ನಿರ್ಮಾಣವಾಗಲಿದೆ.

ಜನರಿಗೆ ದೂರ

ಕಿರಿದಾದ ಕಚೇರಿಯಲ್ಲಿ ಸದ್ಯ ಆಡಳಿತ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನೂತನ ಕಚೇರಿಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಈಗಿರುವ ಕಚೇರಿ ಪಟ್ಟಣದ ಹೃದಯ ಭಾಗದಲ್ಲಿದೆ. ಈ ಕಚೇರಿಗೆ ಅಳ್ಳಕೆರೆ, ಕೆರೆತಾಂಡಾ, ಕುಪ್ಪಯ್ಯ ಕ್ಯಾಂಪ್, ಎಚ್‌ಪಿಸಿ ಭಾಗದ ಜನರಿಗೆ ಎರಡು ಮೂರು ಕಿಮೀ ಇದೆ. ಹೊಸ ಕಚೇರಿ ಪಟ್ಟಣದ ಹೊರವಲಯದಲ್ಲಿನ ಹಂಪಿ ರಸ್ತೆಯ ಅಂಬೇಡ್ಕರ್ ವೃತ್ತದ ಬಳಿ ನಿರ್ಮಾಣವಾಗಿದೆ. ಇದರಿಂದ ಅಳ್ಳಿಕೆರೆ, ಕೆರೆತಾಂಡಾ, ಕುಪ್ಪಯ್ಯ ಕ್ಯಾಂಪ್ ಜನರಿಗೆ ನಾಲ್ಕು ಕಿಮೀ ದೂರ ಆಗಲಿದೆ. ಒಂದೆಡೆ ಮೂಲಸೌಕರ್ಯದೊಂದಿಗೆ ವಿಶಾಲವಾದ ಕಚೇರಿ ನಿರ್ಮಾಣವಾದರೆ, ಕೆಲ ವಾರ್ಡ್ ಜನರಿಗೆ ದೂರವಾಗುತ್ತದೆ.

ಹಂಪಿಗೆ ಆಕರ್ಷಣೆ

ಹಂಪಿ ಎಂದರೆ ಸ್ಥಳೀಯರು ಮಾತ್ರವಲ್ಲದೇ ವಿಶ್ವದ ಮೂಲೆ ಮೂಲೆಯ ಜನರಿಗೂ ಅಚ್ಚು ಮೆಚ್ಚಿನ ತಾಣವಾಗಿದೆ. ಕಮಲಾಪುರ ಪಟ್ಟಣದ ಮಾರ್ಗವಾಗಿಯೇ ಬಹುತೇಕ ಪ್ರವಾಸಿಗರು ಪ್ರಯಾಣ ಬೆಳೆಸುತ್ತಾರೆ. ಪಟ್ಟಣದ ಬಸ್ ನಿಲ್ದಾಣ ಕೂಡ ಮುಂದುಗಡೆ ನಿರ್ಮಾಣವಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೂ ಆಕರ್ಷಣೆಯಾಗುವಂತೆ ಕಚೇರಿ ನಿರ್ಮಾಣವಾಗಿದೆ. ಇನ್ನೂ ಹಂತ ಹಂತವಾಗಿ ಕಚೇರಿ ಸೌಂದರ್ಯೀಕರಣ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಪುರಸಭೆಯಾಗಿ ಮೂರು ವರ್ಷ ಕಳೆದಿದೆ. ಈಗಿನ ಕಚೇರಿ ಕಿರಿದಾಗಿದೆ. ಆದ್ದರಿಂದ 1.80 ಕೋಟಿ ರೂ. ವೆಚ್ಚದಲ್ಲಿ ನೂತನ ಕಚೇರಿ ನಿರ್ಮಾಣವಾಗಿದೆ. ಅಕ್ಟೋಬರ್ ತಿಂಗಳಲ್ಲಿ ಲೋಕಾರ್ಪಣೆ ಆಗಲಿದೆ. - ಡಿ.ಬಿ.ಈರಣ್ಣ, ಪುರಸಭೆ ಮುಖ್ಯಾಧಿಕಾರಿ, ಕಮಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net