

ಹೊಸಪೇಟೆ: ನಗರದಲ್ಲಿ ಸಾರ್ವಜನಿಕರಿಗೆ ಶುದ್ದ ಕುಡಿವ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಯ ಯುಜಿಡಿ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ 5ನೇ ರಾಜ್ಯ ಹಣಕಾಸು ಆಯೋಗದ ಸಭೆಯಲ್ಲಿ ಮಾತನಾಡಿದರು.
ನಗರದ ಎಲ್ಲ ವಾರ್ಡಗಳಿಗೆ ನಿಗಧಿತ ವೇಳೆಗೆ ಕುಡಿವ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಪೈಪ್ಲೈನ್ಗಳನ್ನು ವೈಜ್ಞಾನಿಕವಾಗಿ ಅಳವಡಿಸಬೇಕು. ಅಭಿವೃದ್ಧಿಗೆ ಆದ್ಯತೆ ನೀಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅನಗತ್ಯ ಕ್ರಿಯಾ ಯೋಜನೆ ರೂಪಿಸಿ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದರು.
ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಮಾತನಾಡಿ, ಅಡಳಿತ ಸುಧಾರಣೆಗೆ ನಗರಸಭೆ ಅಧಿಕಾರಿಗಳಿಗೆ, ನೌಕರರಿಗೆ ಆಡಳಿತ ನಿರ್ವಹಣಾ ತರಬೇತಿಗಳನ್ನು ಕ್ರಮಬದ್ದವಾಗಿ ಆಯೋಜನೆ ಮಾಡಬೇಕು. ವೈಚಾರಿಕ ಮತ್ತು ವೈಜ್ಞಾನಿಕ ಆಡಳಿತಕ್ಕೆ ಪೂರಕವಾಗಿ ಆಡಳಿತ ಸಿಬ್ಬಂದಿಯನ್ನು ನೇಮಿಸಲು ವೃಂದ ನೇಮಕಾತಿಗಳಲ್ಲಿ ಅವಕಾಶ ಕಲ್ಪಿಸಬೇಕು. ಇನ್ನೂ ಕೆಲವು ವಾರ್ಡ್ಗಳಿಗೆ ನೀರು ಸರಬರಾಜು ಮಾಡಲು ಅನುದಾನ ಒದಗಿಸಬೇಕಿದೆ. ಅಂಗನವಾಡಿ ಮತ್ತು ಶಾಲಾ ಕಾಲೇಜುಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನ ಬೇಕಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಮಾಡಲು ಸರ್ಕಾರ ಸಂಬAಧಿಸಿದ ಇಲಾಖೆಗಳ ಲೆಕ್ಕ ಶೀರ್ಷಿಕೆಗಳಿಂದ ಈ ವೆಚ್ಚಗಳನ್ನು ಅನುಪಾತ ಮಾದರಿಯಲ್ಲಿ ಹಂಚಿಕೆ ಮಾಡಬೇಕು ಎಂದರು.
ಪೌರಾಯುಕ್ತರಾದ ಸಿ.ಚಂದ್ರಪ್ಪ ಮಾತನಾಡಿ, ನಗರಸಭೆಯಲ್ಲಿ ಒಟ್ಟು 540 ಹುದ್ದೆಗಳಿವೆ. ಅವುಗಳಲ್ಲಿ 240 ಹುದ್ದೆಗಳು ಭರ್ತಿಯಾಗಿದ್ದು, ಪ್ರಸ್ತುತ 300 ಹುದ್ದೆಗಳು ಖಾಲಿ ಇವೆ. 156 ಖಾಯಂ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆಯಲ್ಲಿ 55 ಪೌರಕಾರ್ಮಿಕರು ಸೇರಿದಂತೆ ಒಟ್ಟು 211 ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಉಪಾಧ್ಯಕ್ಷ ರಮೇಶ್ ಗುಪ್ತ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಶಂಕ್ರಿ, ಪೌರಾಯುಕ್ತ ಸಿ.ಚಂದ್ರಪ್ಪ ಇತರರಿದ್ದರು.