

ಹೊಸಪೇಟೆ: ಜನರ ಮೇಲೆ ಕರ ಭಾರವಿಲ್ಲದ, ನಗರಸಭೆ ಕಚೇರಿಯನ್ನು ಹಾಳೆಮುಕ್ತಗೊಳಿಸುವ, ಸ್ವಚ್ಛತೆ, ಅಭಿವೃದ್ಧಿಗೆ ಒತ್ತು ನೀಡುವ ಆಶಯದೊಂದಿಗೆ 2023-24ನೇ ಸಾಲಿಗೆ 2.40 ಕೋಟಿ ರೂ. ಉಳಿತಾಯದ ಬಜೆಟ್‌ಅನ್ನು ಅಧ್ಯಕ್ಷೆ ಸುಂಕಮ್ಮ ಸೋಮವಾರ ಮಂಡಿಸಿದರು.
ಸರ್ಕಾರದ ಅನುದಾನ 42.59 ಕೋಟಿ ರೂ., ನಗರಸಭೆನಿಧಿ 28.95 ಕೋಟಿ ರೂ., ಆಸ್ತಿ ತೆರಿಗೆ ಆದಾಯದಿಂದ 10.50 ಕೋಟಿ ರೂ., ನೀರಿನ ಶುಲ್ಕ 3.53 ಕೋಟಿ ರೂ., ಘನ ತ್ಯಾಜ್ಯ ನಿರ್ವಹಣಾ ತೆರಿಗೆ 3.20 ಕೋಟಿ ರೂ., ಒಳಚರಂಡಿ ಬಳಕೆ ಶುಲ್ಕ(ಯುಜಿಡಿ) 2.60 ಕೋಟಿ ರೂ., ಕಟ್ಟಡ ಕಾಯ್ದೆಗಳಿಗೆ ಸಂಬಂಧಿಸಿ 2.20 ಕೋಟಿ ರೂ., ಆಸ್ತಿ ತೆರಿಗೆ ದಂಡ ಮತ್ತು ಜುಲ್ಮಾನೆಯಿಂದ 1.60 ಕೋಟಿ ರೂ., ಖಾತಾ ಬದಲಾವಣೆ ಶುಲ್ಕದಿಂದ 2.50 ಕೋಟಿ ರೂ., ನಗರಸಭೆ ವಾಣಿಜ್ಯ ಕಟ್ಟಡಗಳ ಬಾಡಿಗೆ 90 ಲಕ್ಷ ರೂ., ವಾಣಿಜ್ಯ ತೆರಿಗೆಯಿಂದ 80 ಲಕ್ಷ ರೂ., ರಾಜ್ಯ ಸರ್ಕಾರದಿಂದ ಸಂಗ್ರಹಿಸಿದ ಸ್ಟ್ಯಾಂಪ್ ಶುಲ್ಕದಿಂದ 15 ಲಕ್ಷ ರೂ., ಘನ ತ್ಯಾಜ್ಯ ವಸ್ತು ನಿರ್ವಹಣೆ ಸೇವಾ ಶುಲ್ಕ 10 ಲಕ್ಷ ರೂ. ಮತ್ತಿತರ ಮೂಲಗಳಿಂದ 80,04,83,000 ರೂ. ಆದಾಯ ನಿರೀಕ್ಷಿಸಲಾಗಿದೆ.
ಸರ್ಕಾರಕ್ಕೆ ಪಾವತಿಸಬೇಕಾದ ಬಾಕಿ 2 ಕೋಟಿ ರೂ., ಎಸ್ಸಿ, ಎಸ್ಟಿ ಜನರ ಅಭಿವೃದ್ಧಿಗೆ 39.40 ಲಕ್ಷ ರೂ., ಕುಡಿಯುವ ನೀರು ಪೂರೈಕೆಗೆ ಅಗತ್ಯವಿರುವ ರಾಸಾಯನಿಕ ದಾಸ್ತಾನು ಖರೀದಿಗೆ 1 ಕೋಟಿ ರೂ., ನಗರ ಅರಣ್ಯೀಕರಣ, ನಗರ ದುಂದರೀಕರಣ, ಉದ್ಯಾನಗಳ ಹೊರಗುತ್ತಿಗೆಗೆ 70 ಲಕ್ಷ ರೂ., ವಿದ್ಯುತ್ ಶುಲ್ಕ ಪಾವತಿ 5 ಲಕ್ಷ ರೂ. ವಿವಿಧ ವೃತ್ತ ಮತ್ತು ಆಟೋ ಶೆಲ್ಟರ್‌ಗಳ ಅಭಿವೃದ್ಧಿಗೆ 5 ಲಕ್ಷ ರೂ., 7ನೇ ವೇತನ ಆಯೋಗದ ಅಂತಿಮ ವರದಿ ಕಾಯ್ದಿರಿಸಿ, ಸರ್ಕಾರ ಶೇ.17 ಮಧ್ಯಂತರ ಪರಿಹಾರಕ್ಕಾಗಿ 30 ಲಕ್ಷ ರೂ., ಬೀದಿದೀಪ ನಿರ್ವಹಣೆ ಮತ್ತಿತರೆ ವೆಚ್ಚಗಳಿಗೆ 77,63,95,500 ರೂ. ತೆಗೆದಿರಿಸುವ ಮೂಲಕ 2,40,87,500 ರೂ.ಉಳಿತಾಯ ಮಾಡುವ ವಿಚಾರ ಮಂಡಿಸಿದರು.
ಅಧ್ಯಕ್ಷೆ ಸುಂಕಮ್ಮ ಅವರ ಸೂಚನೆ ಮೇರೆಗೆ ನಗರಸಭೆ ಉಪಾಧ್ಯಕ್ಷ ಆನಂದ ಎಲ್.ಎಸ್. ಪ್ರಸಕ್ತ ಸಾಲಿನ ಆಯವ್ಯಯ ವಾಚಿಸಿದರು. ನಗರಸಭೆ ಪೌರಾಯುಕ್ತ ಮನೋಹರ್, ಸದಸ್ಯರಾದ ಜಂಬುನಾಥ ತಾರಿಹಳ್ಳಿ, ಎನ್.ರೂಪೇಶ್ ಕುಮಾರ್, ಬಿ.ಜೀವರತ್ನಂ, ಕನಕಮ್ಮ, ಹುಲುಗಪ್ಪ ವಡ್ರು, ಖಾಜಾಬನ್ನಿ, ಎಂ.ಅಸ್ಲಾಮ್, ಸಂತೋಷ ಕುಮಾರ್, ಶೇಕ್ಷಾವಲಿ, ಎಚ್.ಕೆ.ಮಂಜುನಾಥ, ಲತಾ, ಲಕ್ಷ್ಮೀ, ಕೆ.ಗೌಸ್, ಎಚ್.ಶಂಕುಂತಲಾ, ಎ.ಲತಾ ಇತರರು ಇದ್ದರು.