

ಹೊಸಪೇಟೆ: ಜಿಲ್ಲೆಯ ಆಸ್ಪತ್ರೆಗಳಲ್ಲಿ ತಾಯಿ ಮತ್ತು ಶಿಶು ಮರಣ ಪ್ರಕರಣಗಳು ಹೆಚ್ಚಳವಾಗದಂತೆ ವೈದ್ಯಾಧಿಕಾರಿಗಳು ಸೂಕ್ತ ಕ್ರಮವಹಿಸಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಯಂದಿರ, ಶಿಶು ಮತ್ತು ಮಕ್ಕಳ ಮರಣ ಲೆಕ್ಕಪರಿಶೋಧನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಆರೋಗ್ಯ ಕೇಂದ್ರದಲ್ಲಿದ್ದು ರೋಗಿಗಳ ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ತಾಯಂದಿರು ಮತ್ತು ಶಿಶು, ಮಕ್ಕಳ ಸಾವು ಪ್ರಕರಣಗಳು ಹೆಚ್ಚಾಗದಂತೆ ಸೂಕ್ತ ಕ್ರಮ ವಹಿಸಲು ಜಿಲ್ಲಾ ಕೇಂದ್ರದಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯಾಧಿಕಾರಿಗಳು ಜಿಲ್ಲಾ ಮತ್ತು ತಾಲೂಕು ಮಟ್ಟದ ಸಭೆಗಳನ್ನು ಪ್ರತಿ ಶನಿವಾರ ಆಯೋಜಿಸಿ ಕುಂದು ಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ಸೂಚಿಸಿದರು.
ಗರ್ಭಿಣಿ ಮಹಿಳೆಯರಿಗೆ ತುರ್ತು ಸೇವೆ ಅಗತ್ಯವಿದ್ದಲ್ಲಿ ಅಂತವರ ಮನೆಗಳಿಗೆ ತಾಲೂಕು ವೈದ್ಯಾಧಿಕಾರಿಗಳು ಮತ್ತು ಮೇಲ್ವಿಚಾರಣ ಸಿಬ್ಬಂದಿಗಳು ಭೇಟಿ ನೀಡಿ ಅಗತ್ಯ ಚಿಕಿತ್ಸೆ ನೀಡಲು ಮುಂದಾಗಬೇಕು. ಗುಣಮಟ್ಟದ ಸೇವೆ ಒದಗಿಸಲು ಲಭ್ಯವಿರುವ ನಿಧಿಯ ಬಳಕೆ ಮಾಡಿಕೊಳ್ಳಬೇಕು. ಗರ್ಭಿಣಿ ಮಹಿಳೆಯರಿಗೆ ಉತ್ತಮ ಆರೋಗ್ಯ ಸಲಹೆಗಳು ಸೇರಿದಂತೆ ಮುಂಜಾಗೃತಾ ಕ್ರಮಗಳ ಜಾಗೃತಿ ಮೂಡಿಸಬೇಕು. ಆಯುಷ್ ಇಲಾಖೆಯಿಂದ ಗರ್ಭಿಣಿ ಮತ್ತು ಬಾಣಂತಿಯರ ತಪಾಸಣೆ, ಸುರಕ್ಷಿತ ಹೆರಿಗೆ ಹಾಗೂ ಪೌಷ್ಠಿಕಾಂಶದ ಬಗ್ಗೆ ಆಪ್ತ ಸಮಲೋಚನೆ ನಡೆಸಬೇಕು. ಸಾಮಾನ್ಯವಾಗಿ ರಕ್ತಹೀನತೆ, ರಕ್ತಸ್ರಾವ, ತಾಯಿ ಮರಣ ಪ್ರಮಾಣಕ್ಕೆ ಪ್ರಮುಖ ಅಂಶವಾಗಿದೆ. ಇದರ ಬಗ್ಗೆ ಆರೋಗ್ಯ ಇಲಾಖೆಯವರು ಹೆಚ್ಚು ಆದ್ಯತೆ ನೀಡಬೇಕು ಎಂದರು.
ಜಿಪA ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಡಿಎಚ್‌ಒ ಡಾ.ಎಲ್.ಆರ್.ಶಂಕರನಾಯ್ಕ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಜಂಬಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ನಾಯ್ಕ, ಜಿಲ್ಲಾ ವೈದ್ಯಾಧಿಕಾರಿ ಡಾ.ಹರಿಪ್ರಸಾದ್, ಡಾ.ಭಾಸ್ಕರ್, ಡಾ.ರಾಧಿಕಾ ಇತರರಿದ್ದರು.