

ಮಂಜುನಾಥ ಅಯ್ಯಸ್ವಾಮಿ
ಹೊಸಪೇಟೆ: ಪ್ರಸಕ್ತ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಮೇ, ಜೂನ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದ್ದು, ಬಿತ್ತನೆ ಕಾರ್ಯ ಚುರುಕು ಪಡೆದುಕೊಂಡಿದೆ. ಮೆಕ್ಕೆಜೋಳ ಸೇರಿ ಇತರೆ ಬೆಳೆಗಳ ಬಿತ್ತನೆಯಲ್ಲಿ ಕೃಷಿಕರು ಮಗ್ನರಾಗಿದ್ದಾರೆ.
ಜಿಲ್ಲೆಯ ಆರು ತಾಲೂಕು ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ ಬೀಳುತ್ತಿದೆ. ಕಳೆದ ವರ್ಷ ತೀವ್ರ ಬರಗಾಲದಿಂದ ಬೆಳೆ ನಾಶವಾಗಿ ತೀವ್ರ ನಷ್ಟ ಅನುಭವಿಸಿರುವ ರೈತರು ಪ್ರಸಕ್ತ ಮುಂಗಾರಿನಲ್ಲಿ ಉತ್ಸಾಹದಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಜನವರಿಯಿಂದ ಜೂನ್ 14ರ ವರೆಗೆ 140.3 ಮಿ.ಮೀ. ವಾಡಿಕೆ ಮಳೆ ಬದಲಿಗೆ, 210.4 ಮಿ.ಮೀ. ಮಳೆಯಾಗಿದ್ದು, ಶೇ.50 ಹೆಚ್ಚು ಮಳೆಯಾಗಿದೆ. ಇದೇ ತಿಂಗಳ 14 ದಿನಗಳಲ್ಲಿ 41.7 ಮಿಮೀ ಮಳೆಗೆ, 92.6 ಮಿಮೀ ಮಳೆಯಾಗಿದೆ. ಎಲ್ಲೆಡೆ ಬಿತ್ತನೆಗೆ ಭೂಮಿ ಹದಗೊಂಡಿದೆ. ಉತ್ತಮ ಮಳೆಯಿಂದ ರೈತಾಪಿ ಸಮುದಾಯದಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿದೆ. ಹಿಂದಿನ ವರ್ಷದ ಬರಗಾಲದ ಕಹಿಯನ್ನು ಮರೆತು ಬಿತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 2.94 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದ್ದು, ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಸಲಾಗಿದೆ. ಮೆಕ್ಕೆಜೋಳ, ಜೋಳ, ತೊಗರಿ ಶೇಂಗಾ, ಸೂರ್ಯಕಾಂತಿ, ಸೇರಿ ಶೇಂಗಾ ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಜಿಲ್ಲೆಯ ಪ್ರಮುಖ ಬೆಳೆಗಳು. 1.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 1.03 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳ ಬೇಡಿಕೆಯಿದೆ. ಇದರಲ್ಲಿ 26735.4 ಮೆಟ್ರಿಕ್ ಟನ್ ಯೂರಿಯಾ, 9478.6 ಮೆ.ಟನ್ ಡಿಎಪಿ, 1675.1 ಮೆ.ಟನ್ ಎಂಒಪಿ, 28625.9 ಮೆ.ಟನ್ ಎಂ.ಓ.ಪಿ, 217.5 ಮೆ.ಟನ್ ಎಸ್‌ಎಸ್‌ಪಿ, ಒಟ್ಟು 66890.4 ಮೆ.ಟನ್ ರಸಗೊಬ್ಬರಗಳ ದಾಸ್ತಾನು ಇದೆ. ಇದರಲ್ಲಿ 39268.2 ಮೆ.ಟನ್ ಗೊಬ್ಬರ ವಿತರಣೆಯಾಗಿದ್ದು, 27621.9 ಮೆ.ಟನ್ ಉಳಿದಿದೆ.
ಜಿಲ್ಲೆಯಲ್ಲಿ ಸಮೃದ್ಧವಾಗಿ ಮಳೆ ಸುರಿಯುತ್ತಿದ್ದು, ಆಶಾದಾಯಕ ವಾತಾವರಣ ಇದೆ. ರೈತರಿಗೆ ಬಿತ್ತನೆಗೆ ಅಗತ್ಯವಾದ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಸಕಾಲದಲ್ಲಿ ಪೂರೈಕೆ ಮಾಡುವಂತೆ ಈಗಾಗಲೇ ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಖಾಸಗಿಯವರ ಅಂಗಡಿಗಳು ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಕಳಪೆ ಬೀಜ ವಿತರಣೆ ಮಾಡುವ ಬಗ್ಗೆ ದೂರುಗಳು ಕೇಳಿಬಂದಲ್ಲಿ ಸಂಬಂಧಪಟ್ಟವರನ್ನೇ ಹೊಣೆ ಆಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಎಚ್ಚರಿಸಿದ್ದಾರೆ.
ಈ ಬಾರಿ ಮಳೆ ಚೆನ್ನಾಗಿ ಬಂದಿದ್ದ ರಿಂದ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇವೆ. ಬೇಗ ಬಿತ್ತನೆ ಮಾಡುವುದರಿಂದ ಹಿಂಗಾರು ಬೆಳೆಗೂ ಅನುಕೂಲವಾಗುತ್ತದೆ.ಎನ್.ವೀರೇಶ್ ರೈತ, ನಿಂಬಳಗೇರೆ, ಕೊಟ್ಟೂರು
ರೈತರು ಅಧಿಕೃತ ಮಾರಾಟಗಾರರಿಂದ ಬಿತ್ತನೆ ಬೀಜ ಮಾತ್ರ ಖರೀದಿಸಬೇಕು. ಬಿಡಿಯಾಗಿ ಸಿಗುವ ಬಿತ್ತನೆ ಬೀಜ ಖರೀದಿಸಬೇಡಿ. ಈ ಬಾರಿ 2.94 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಈಗಾಗಲೇ ಶೇ.40 ಬಿತ್ತನೆಯಾಗಿದೆ. ಮಳೆ ಹೆಚ್ಚಿರುವುದರಿಂದ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಬೆಳೆ ವಿಮೆ ಮಾಡಿಸುವುದು ಉತ್ತಮ. ಹೆಚ್ಚಾಗಿ ತೊಗರಿ ಬೆಳೆಯಬೇಕು.ಶರಣಪ್ಪ ಮುದುಗಲ್ ಕೃಷಿ ಜಂಟಿ ನಿರ್ದೇಶಕ, ವಿಜಯನಗರ