

ಹೊಸಪೇಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳನ್ನು ಸೋಮವಾರ ಪರಿಶೀಲಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಶಿಲ್ಪಾನಾಗ್ ಮೆಚ್ಚುಗೆ ಸೂಚಿಸಿದರು.
ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ವೀಕ್ಷಿಸಿ, ಫಲಾನುಭವಿ ಹಾಗೂ ನರೇಗಾ ಕೂಲಿ ಕಾರ್ಮಿಕರೊಂದಿಗೆ ಚರ್ಚಿಸಿದರು.
ಹೊಸಪೇಟೆ ತಾಲೂಕಿನ 114 ಡಣಾಪುರ ಗ್ರಾಪಂ ವ್ಯಾಪ್ತಿಯ 114 ಡಣಾಪುರ ಗ್ರಾಮದ ಅಂಗನವಾಡಿ ಪೌಷ್ಟಿಕ ಕೈತೋಟ ವೀಕ್ಷಿಸಿದ ಆಯುಕ್ತರು, ಈ ತೋಟದಲ್ಲಿ ತರಕಾರಿ, ಸೊಪ್ಪು ಬೆಳೆದು ಅಂಗನವಾಡಿ ಮಕ್ಕಳಿಗೆ ಅಡುಗೆ ಮಾಡಿ ಉಣಬಡಿಸಬೇಕು. ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದು ಅಂಗನವಾಡಿ ಸಿಬ್ಬಂದಿಗೆ ತಿಳಿಸಿದರು.
ಗ್ರಾಮದ ಮೂವರು ಅಂಗವಿಕಲರಿಗೆ ನರೇಗಾ ಉದ್ಯೋಗ ಚೀಟಿ ವಿತರಿಸಿ, ಇದೇ ವೇಳೆ ವಿದ್ಯಾ ಜ್ಯೋತಿ ಒಕ್ಕೂಟದ ಮಹಿಳಾ ಸದಸ್ಯರೊಂದಿಗೆ ಒಕ್ಕೂಟದಲ್ಲಿ ಕೈಗೊಳ್ಳುವ ವಿವಿಧ ರೀತಿಯ ಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಿದರು. ಇನ್ನು ಡಣನಾಯಕನಕೆರೆ ಗ್ರಾಪಂ ವ್ಯಾಪ್ತಿಯ ಇಕೋ ಪಾರ್ಕ್‌ನಲ್ಲಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಹಗರಿಬೊಹಳ್ಳಿ ತಾಲೂಕಿನ ಮರಬ್ಬಿಹಾಳ್ ಗ್ರಾಪಂ ವ್ಯಾಪ್ತಿಯ ಉಪನಾಯಕನಹಳ್ಳಿಯ ಹೊರವಲಯದಲ್ಲಿ ಹಮ್ಮಿಕೊಂಡ ಸಮುದಾಯದ ಕೃಷಿ ಹೊಂಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತರು, ಕಾಮಗಾರಿ ವೀಕ್ಷಿಸಿ ಎನ್‌ಎಂಎಂಎಸ್ ಆ್ಯಪ್ ಬಳಕೆ, ಉದ್ಯೋಗ ಚೀಟಿಯಲ್ಲಿ ಮಾಹಿತಿ ಕೇಂದ್ರೀಕರಿಸುವ ಕುರಿತು ಬಿಎಫ್‌ಟಿ, ಗ್ರಾಮ ಕಾಯಕ ಮಿತ್ರ, ಕಾಯಕ ಬಂಧುಗಳಿಗೆ ಸೂಚಿಸಿದರು.
ನಂತರ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿದ್ದ ಕ್ಷೇತ್ರ ಬದುನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮೂಲಸೌಲಭ್ಯ ಹಾಗೂ ಕೆಲಸ ಅಳತೆ, ಪ್ರಮಾಣದ ಬಗ್ಗೆ ಕೂಲಿ ಕಾರ್ಮಿಕರಿಂದ ಮಾಹಿತಿ ಪಡೆದರು. ಬ್ಯಾಸಿಗಿದೇರಿ ಗ್ರಾಪಂ ವ್ಯಾಪ್ತಿಯ ನಂದಿಪುರ ಗ್ರಾಮದ ರಾಜಾಭಕ್ಷಿ ಎನ್ನುವವರು ವೈಯಕ್ತಿಕ ಕಾಮಗಾರಿಯಡಿ ನಿರ್ಮಿಸಿಕೊಂಡ ಮಾದರಿ ಕೋಳಿಶೆಡ್, ಹೈಡ್ರೋಫೋನಿಕ್ಸ್ ಘಟಕ, ಅಜೋಲಾ ಘಟಕಗಳನ್ನು ಉದ್ಘಾಟಿಸಿ ಪರಿಶೀಲಿಸಿದ ಆಯುಕ್ತರು, ಕೋಳಿಶೆಡ್ ನಿರ್ಮಿಸಿಕೊಂಡು ಲಾಭ ಪಡೆಯುತ್ತಿರುವ ಫಲಾನುಭವಿಯ ಅಭಿಪ್ರಾಯ ಕೇಳಿ ಆಯಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.