ಅನುಚಿತ ವರ್ತನೆ ತೋರಿದ ಪೇದೆ ಅಮಾನತು

Kallesh gouda Constable Suspended
ಕಲ್ಲೇಶ್‌ಗೌಡ
Published on

ಹೊಸಪೇಟೆ: ಮದ್ಯಕ್ಕಾಗಿ ಡಾಬಾ ಮಾಲೀಕರೊಂದಿಗೆ ಜಗಳ ಮಾಡಿ, ಅನುಚಿತವಾಗಿ ವರ್ತಿಸಿದ್ದ ಹಿರೇಹಡಗಲಿ ಪೊಲೀಸ್ ಠಾಣೆಯ ಪೇದೆಯೊಬ್ಬನನ್ನು ಅಮಾನತು ಮಾಡಿ ವಿಜಯನಗರ ಎಸ್‌ಪಿ ಡಾ.ಅರುಣ ಕೆ. ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಠಾಣೆಯ ಎಸ್‌ಬಿ ಕಾನ್ಸಟೇಬಲ್ ಕಲ್ಲೇಶ್‌ಗೌಡ ಅಮಾನತಾದ ಪೇದೆ. ಜು.17 ರಂದು ಮೈಲಾರ ಕ್ರಾಸ್‌ನಲ್ಲಿರುವ ಡಾಬಾವೊಂದರಲ್ಲಿ ಕಲ್ಲೇಶಗೌಡ ಇತರರು ಊಟ ಮಾಡುತ್ತಿದ್ದರು. ಅವರಿಗೆ 2 ಬಾಟಲ್ ಮದ್ಯ ಕೊಡುವಂತೆ ಸಪ್ತಗಿರಿ ಡಾಬಾದ ಮಾಲೀಕರು ಕೇಳಿಕೊಂಡು ಬಂದಿದ್ದರು. ಬೇರೆ ಕೆಲಸದಲ್ಲಿದ್ದೇನೆ ಎಂದು ಮದ್ಯ ನೀಡಲು ಹಸಿರು ಮನೆ ಡಾಬಾದ ಗುರುರಾಜ ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡಿದ್ದ ಪೇದೆ ಕುಡಿದ ಮತ್ತಿನಲ್ಲಿ ಸಂಜೆ ಗುರುರಾಜ ಜತೆೆ ಜಗಳ ತೆಗೆದಿದ್ದಾರೆ. ಈ ಕುರಿತು ದೂರು ನೀಡಲು ಉಪ ಠಾಣೆಗೆ ಬಂದಿದ್ದ ಗುರುರಾಜ ಮತ್ತು ಆತನ ಪತ್ನಿಯೊಂದಿಗೆ ಜಗಳ ಮಾಡಿ, ಸಾರ್ವಜನಿಕರೊಂದಿಗೆ ಬೇಜವಾಬ್ದಾರಿಯಿಂದ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ದರಿಂದ ಕಲ್ಲೇಶಗೌಡ ಅವರನ್ನು 6 ತಿಂಗಳು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net