ಹೊಸಪೇಟೆಯ ಐಎಂಎ ಹಾಲ್‌ನಲ್ಲಿ ಹೆಚ್ಚುವರಿ ಬೆಡ್‌ಗಳ ಏರ್ಪಾಟಿಗೆ ವೈದ್ಯರ ಸಮ್ಮತಿ: ಸಚಿವ ಆನಂದ ಸಿಂಗ್ ಅಧ್ಯಕ್ಷತೆಯಲ್ಲಿ ಸಭೆ

19072020 Hospet Minister Anand Singh
Published on

ಹೊಸಪೇಟೆ: ಇನ್ನಾರು ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಆದ್ದರಿಂದ ನಗರದಲ್ಲಿ ಹೆಚ್ಚುವರಿ 100 ಬೆಡ್‌ಗಳ ಸಿದ್ಧತೆ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.

ನಗರದ ಸಿದ್ಧಿಪ್ರಿಯಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ವೈದ್ಯರು ಹಾಗೂ ಹೋಟೆಲ್ ಮಾಲೀಕರ ಸಭೆಯಲ್ಲಿ ಮಾತನಾಡಿದರು. ನಗರದಲ್ಲಿರುವ ಖಾಸಗಿ ಆಸ್ಪತ್ರೆ ಹಾಗೂ ಹೋಟೆಲ್‌ಗಳ ಪಟ್ಟಿಯನ್ನು ತಾಲೂಕು ಆಡಳಿತ ಸಿದ್ಧಪಡಿಸಬೇಕು. ಅವುಗಳಲ್ಲಿ ಕರೊನಾ ಸೋಂಕಿತರ ಚಿಕಿತ್ಸೆಗೆ ಪೂರಕವಾಗಿರುವ ಸ್ಥಳಗಳನ್ನು ಪರಿಶೀಲಿಸಿ ಬಳಸಿಕೊಳ್ಳಬೇಕು. ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಐಎಂಎ ಅಧ್ಯಕ್ಷ ಡಾ.ಚಾಮರಾಜ ಮಾತನಾಡಿ, ಕರೊನಾ ನಿಯಂತ್ರಣಕ್ಕೆ ವೈದ್ಯರು ಕೈಜೋಡಿಸಿದ್ದಾರೆ. ನಗರದಲ್ಲಿ ಬೃಹತ್ ಖಾಸಗಿ ಆಸ್ಪತ್ರೆಗಳು ಬೆರಳೆಣಿಕೆಯಷ್ಟಿವೆ. ಅದರಲ್ಲಿ ಮನೆ ಸಮೇತ ನರ್ಸಿಂಗ್ ಹೋಮ್‌ಗಳಿವೆ. ಹಾಗಾಗಿ ಬಳ್ಳಾರಿ ರಸ್ತೆಯ ಐಎಂಎ ಹಾಲ್‌ನಲ್ಲಿ ಬೆಡ್ ಒದಗಿಸಲು ವೈದ್ಯರು ಸಮ್ಮತಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು. ಸಹಾಯಕ ಆಯುಕ್ತ ಶೇಕ್ ತನ್ವೀರ್ ಆಸೀಫ್ ಮಾತನಾಡಿದರು. ತಹಸೀಲ್ದಾರ್ ಎಚ್.ವಿಶ್ವನಾಥ, ತಾಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net