

ಹೊಸಪೇಟೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮಾದಿಗ ಜನಾಂಗವನ್ನು ನಿರ್ಲಕ್ಷ್ಯ ಮಾಡಲಾಗಿದ್ದು, ಜನಾಂಗವನ್ನು ನಿರ್ಲಕ್ಷ್ಯ ಮಾಡಲಾಗಿದ್ದು, ಸಚಿವ ಸಂಪುಟದಲ್ಲಿ ಮಾದಿಗರಿಗೆ ಪ್ರಾಧಾನ್ಯತೆ ನೀಡಬೇಕೆಂದು ಅಂಬೇಡ್ಕರ್ ಸಂಘದ ಗೌರವಾಧ್ಯಕ್ಷ ಎಂ.ಸಿ.ವೀರಸ್ವಾಮಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಮುದಾಯದಿಂದ ವಿಜಯಪುರ ಜಿಲ್ಲೆಯ ರಮೇಶ ಜಿಗಜಿಣಗಿ ಅವರು 7 ಬಾರಿ ಸತತವಾಗಿ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹಿರಿಯರಾದ ಗೋವಿಂದ ಕಾರಜೋಳ ಅವರು ಉಪಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡದೆ ಕಡೆಗಣಿಸಲಾಗಿದೆ. ಸಮುದಾಯಕ್ಕೆ ರಾಜ್ಯದಲ್ಲಿ ಕೊಟ್ಟಿದ್ದ ಎರಡೂ ಸೀಟ್ ಗಳಲ್ಲಿ ಗೆದ್ದಿದ್ದಾರೆ. ಸಂಭವನೀಯರ ಪಟ್ಟಿಯಲ್ಲಿ ಇವರ ಹೆಸರಿತ್ತು. ಇವರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದಿರುವುದು ಸಮುದಾಯಕ್ಕೆ ಮಾಡಿದ ಅಪಚಾರ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸಮುದಾಯ ಹೆಚ್ಚು ಜನಸಂಖ್ಯೆ ಹೊಂದಿದೆ. ಮಾದಿಗ ಮತ್ತು ಉಪ ಜಾತಿಗಳು ಇಂದೂ ಸಹ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಮೂಲಭೂತ ಹಕ್ಕುಗಳಿಗಾಗಿ ಹೋರಾಡುವ ದುಸ್ಥಿತಿ ಮುಂದುವರಿದಿದೆ. ಕಾಂಗ್ರೆಸ್ ಕೂಡ ಆಂಜನೇಯ ಅವರಿಗೆ ಎಂಎಲ್ಸಿ ಸ್ಥಾನ ನೀಡುವ ನಿರೀಕ್ಷೆ ಇತ್ತು. ಆದರೆ, ಅಲ್ಲಿಯೂ ನಮ್ಮನ್ನು ಕಡೆಗಣಿಸಲಾಗಿದೆ. ಎಲ್ಲ ಕಡೆಯೂ ಮಾದಿಗ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ. ಎರಡು ರಾಷ್ತ್ರೀಯ ಪಕ್ಷಗಳು ಮಾದಿಗರಿಗೆ ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಸೌಲಭ್ಯಗಳಿಂದ ವಂಚಿತರಾಗಿರುವ ಸಮುದಾಯದವರು ಸಮಾಜದ ಮುಖ್ಯವಾಹಿನಿಯಿಂದ ಬಹುದೂರ ಉಳಿದಿದ್ದಾರೆ. ಆದ್ದರಿಂದ, ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಸಮುದಾಯಕ್ಕೆ ಸಚಿವ ಸ್ಥಾನ ನೀಡಲೇ ಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಮಾರೇಣ್ಣ, ಸೇಲ್ವಂ, ರಾಮಚಂದ್ರ, ಸಿ.ಆರ್.ಭರತ್ ಕುಮಾರ್, ಎಚ್ ಶ್ರೀನಿವಾಸ, ಶೇಷು, ಬಸವರಾಜ, ಕರಿಯಪ್ಪ, ಪಂಪಾಪತಿ, ಹನುಂಮತಪ್ಪ, ಜಗನ್ನಾಥ, ಮಾರೇಶ, ವಿಜಯ್ ಕುಮಾರ್ ಇತರರಿದ್ದರು.