ಸಮಾಜ ಒಟ್ಟಾಗದಿದ್ದರೆ ಮತ್ತೊಂದು ಆಕ್ರಮಣಕ್ಕೆ ಸಿದ್ಧರಾಗಿ

05 MANJU 01
Published on

ಹೊಸಪೇಟೆ: ಜಾತಿಭೇದ, ಮೇಲು-ಕೀಳು, ಅಸ್ಪ್ರಶ್ಯತೆ ಮರೆತು ರಾಷ್ಟ್ರವೇ ಸರ್ವೋಚ್ಛ ಎಂಬ ಚಿಂತನೆಯಡಿ ಒಂದಾಗದಿದ್ದರೆ ಮತ್ತೊಮ್ಮೆ ಪರಕಿಯರ ಆಕ್ರಮಣಕ್ಕೆ ಒಳಗಾಗುವ ಅಪಾಯವಿದೆ ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಪರಮಪೂಜ್ಯ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಎಚ್ಚರಿಸಿದರು.

ಸಾಮಾಜಿಕ ಸಾಮರಸ್ಯ ವೇದಿಕೆಯಿಂದ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉತ್ತರ ಪ್ರಾಂತ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಆಶೀರ್ವಚನ ನೀಡಿದರು. ನಮ್ಮಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಸೃಷ್ಟಿಯಾಗಿರುವ ಸಮಸ್ಯೆಯಿಂದ ಮುಂದೆ ಎದುರಾಗಬಹುದಾದ ಆಪತ್ತಿನ ಗಂಭೀರತೆ ಅರಿತು ತಕ್ಷಣವೇ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ ನಮ್ಮ ಧರ್ಮ, ಮಠ, ಮಂದಿರ, ಮಹಿಳೆಯರು, ನಮ್ಮತನ ಹೀಗೆ ಎಲ್ಲವೂ ಕಳೆದುಕೊಳ್ಳುವುದು ತಪ್ಪಿದ್ದಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಮತಾಂತರ ಸಮಾಜಕ್ಕೆ ದೊಡ್ಡ ಪಿಡುಗಾಗಿದೆ. ಸಮಾಜದ ಮುಖ್ಯ ವಾಹಿನಿಯಲ್ಲಿರುವ, ಮೇಲ್ಜಾತಿ ಎನಿಸಿಕೊಂಡವರು ಸಹ ಈಗ ಮತಾಂತರಕ್ಕೆ ಒಳಗಾಗುತ್ತಿದ್ದಾರೆ. ಈಗಲೂ ದೇವಸ್ಥಾನ ಪ್ರವೇಶಕ್ಕೆ ಮುಕ್ತ ಅವಕಾಶಗಳಿಲ್ಲ. ಸಾಮಾಜಿಕ ಬಹಿಷ್ಕಾರಗಳು ನಡೆಯುತ್ತಿವೆ. ನಮಗೆ ಅರಿವು ಇಲ್ಲದಂತೆ ಇವೆಲ್ಲ ತಾರತಮ್ಯ ಆಗಿರಬಹುದು. ಇನ್ನಾದರೂ ಇದನ್ನೆಲ್ಲ ಸರಿಪಡಿಸಬೇಕಿದೆ ಎಂದರು.

ಸಮಾಜದಲ್ಲಿ ಸಾಮರಸ್ಯ ತರಲು ರಾಷ್ಟ್ರೀಯ ಸ್ವಯಂಸೇವಕ ಸಂಘ, ಸಾಮಾಜಿಕ ಸಾಮರಸ್ಯ ವೇದಿಕೆ ಮಾಡುತ್ತಿರುವ ಕೆಲಸ ಮಾದರಿಯಾಗಿದೆ. ಸಂಘದ ಅಪಪ್ರಚಾರ ವ್ಯವಸ್ಥಿತವಾಗಿ ನಡೆದಿದೆ. ಹೊರಗಿನಿಂದ ನೋಡುವವರು ಮಾತ್ರ ಸಂಘ ಧರ್ಮಾಧರಿತ, ಕೋಮುಭಾವ ಬಿತ್ತುತ್ತಿದೆ ಎಂದು ಟೀಕಿಸುತ್ತಾರೆ. ಸಂತರು, ಮಹಾಪುರುಷರಿಂದ ಸಾಮರಸ್ಯ ಗಟ್ಟಿಗೊಳಿಸುವ ಕಾರ್ಯ ಮಾಡಿದ್ದಾರೆ. ಹೊರಗೆ ಬಂದಾಗ ನಾವೆಲ್ಲರೂ ಒಂದೇ ಇರಬೇಕು. ರಾಷ್ಟ್ರದ ಹಿತವೇ ನಮ್ಮ ಧ್ಯೇಯವಾಗಬೇಕು ಎಂದು ಕರೆ ನೀಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ ಸಹ ಕಾರ್ಯವಾಹ ಟಿ.ಪ್ರಸನ್ನ ಮಾತನಾಡಿ, ಅಸ್ಪ್ರಶ್ಯತೆ ಎಂಬುದು ಈ ಸಮಾಜಕ್ಕೆ ಅಂಟಿದ ಕಳೆ. ಮತಾಂತರದಿAದ ರಾಷ್ಟ್ರಾಂತರ ಆಗುತ್ತದೆ. ದೇಶಕ್ಕೆ ಕಂಟಕವಾದ ಮತಾಂತರಕ್ಕೆ ಕಡಿವಾಣ ಹಾಕಬೇಕಿದೆ. ಮನಸ್ಸಿನೊಳಗಿನ ದೋಷ ತೊಡೆದು, ದೇಶ ದೊಡ್ದದು ಎಂದು ಹೆಜ್ಜೆ ಇಡುವ ಸಂಕಲ್ಪ ಮಾಡಿದರೆ ಬದಲಾವಣೆ ಸಾಧ್ಯ ಎಂದು ಹೇಳಿದರು.

ವೇದಿಕೆಯ ಸಹ ಸಂಯೋಜಕ ರವೀಂದ್ರ ಕಿರಕೋಳೆ, ಸ್ವಯಂಸೇವಕ ಸಂಘದ ಸಂಚಾಲಕ ಬಸವರಾಜ ಡಂಬಳ, ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣ ತಳವಾರ, ಪ್ರಮುಖರಾದ ನರೇಂದ್ರಜಿ, ಸು. ಕೃಷ್ಣಮೂರ್ತಿ, ಶ್ರೀಧರ ಜೋಶಿ, ಸೀತಾರಾಮ ಭಟ್, ಉತ್ತರ ಪ್ರಾಂತ ಸಂಯೋಜಕ ಶಿವಲಿಂಗ ಕುಂಬಾರ, ಮಾರುತಿ ಕಟ್ಟಿಮನಿ, ಎನ್.ಹಂಸವೇಣಿ, ಪೂಜಾ ಜೋಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net