ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ

28 Manju 04
Published on

ಹೊಸಪೇಟೆ: ತಂತ್ರಜ್ಞಾನದ ದುರುಪಯೋಗ ಮಾಡಿಕೊಂಡು ಪ್ರಸವ ಪೂರ್ವದಲ್ಲಿಯೇ ಗರ್ಭದಲ್ಲಿರುವ ಮಗುವಿನ ಲಿಂಗ ಪತ್ತೆ ಹಚ್ಚುವುದು ಕಾನೂನು ರೀತಿ ಶಿಕ್ಷಾರ್ಹ ಅಪರಾಧ ಎಂದು ನಗರದ 2ನೇ ಅಪರ ಸಿವಿಲ್ ನ್ಯಾಯಾಧೀಶ ಜಿ.ಸಜೀವ ಕುಮಾರ್ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪ್ರಸೂತಿ ತಜ್ಞನರಿಗೆ ಏರ್ಪಡಿಸಲಾಗಿದ್ದ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಕಾಯ್ದೆ 1994ರ ಕುರಿತು ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಲಿಂಗ ಪತ್ತೆ ತಂತ್ರಜ್ಞಾನ ದುರ್ಬಳಕೆಯಾಗುತ್ತಿದೆ. ಗರ್ಭಾವಸ್ಥೆಯಲ್ಲಿ ಭ್ರೂಣ ಹೆಣ್ಣು ಎಂದು ಕಂಡುಬಂದ ತಕ್ಷಣ ಅದನ್ನು ಗರ್ಭದಲ್ಲೇ ಹತ್ಯೆ ಮಾಡುವ ಪ್ರವೃತ್ತಿ ಸರಿಯಲ್ಲ. ಇದರ ಪರಿಣಾಮದಿಂದ ಪುರುಷರು ಮತ್ತು ಮಹಿಳೆಯರ ಅನುಪಾತದಲ್ಲಿ ವ್ಯತ್ಯಾಸವಾಗುತ್ತದೆ ಎಂದರು.

ಮಹಿಳಾ ಸ್ವಯಂ ಸೇವಾ ಸಂಸ್ಥೆಗಳು, ಆರೋಗ್ಯ ಸಂಸ್ಥೆಗಳು, ಗ್ರಾಮ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಆರೋಗ್ಯ ಕಾರ್ಯಕರ್ತೆಯರು, ಚುನಾಯಿತ ಮಹಿಳಾ ಪ್ರತಿನಿಧಿಗಳು ಸಂಘಟಿತರಾಗಿ ಕಾರ್ಯನಿರ್ವಹಿಸಿದರೆ ಸ್ತ್ರೀ ಭ್ರೂಣ ಹತ್ಯೆ ತಡೆಗಟ್ಟಲು ಸಾಧ್ಯ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ವಿನಯ್ ಮಾತನಾಡಿ, ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ತಡೆಯಲು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆ ಪ್ರಕಾರ ಮೊದಲ ಅಪರಾಧಕ್ಕೆ ಜೈಲುಶಿಕ್ಷೆ ಜತೆ ದಂಡ ಹಾಗೂ ವೈದ್ಯಕೀಯ ವೃತ್ತಿಯಿಂದ ಅಮಾನತುಗೊಳಿಸಲು ಅವಕಾಶವಿದೆ. ಶಿಕ್ಷೆ ವೈದ್ಯರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯ ಗಂಡ, ಅತ್ತೆ, ಮಾವ ಹಾಗೂ ಇವರ ಸಂಬಂಧಿಕರೂ ಭ್ರೂಣ ಲಿಂಗಪತ್ತೆ ಕ್ರಿಯೆಗೆ ಪ್ರೋತ್ಸಾಹಿಸಿದರೆ ಅಂತಹವರೂ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಖ್ಯಸ್ಥ ಡಾ.ಅರುಣ್ ವಿಕಿರಣ, ಪ್ರಮುಖರಾದ , ಡಾ.ಬಸವರಾಜ, ಎಂ.ಡಾ.ಧರ್ಮನಗೌಡ, ವೈದ್ಯರಾದ ಡಾ.ಹೇಮ ಲತಾ, ಡಾ.ಬಸವನಗೌಡ. ಡಾ ಜಯಶ್ರೀ. ಡಾ.ಗಂಗೋತ್ರಿ ಡಾ.ಚೈತ್ರಾ‌ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net