

ಹೊಸಪೇಟೆ: ಆರ್‌ಟಿಇ ಕಾಯ್ದೆ ವಿಸ್ತರಣೆ ಹಾಗೂ ಪಿಯುಸಿ ಉಪನ್ಯಾಸಕರಿಗೆ ನೇಮಕಾತಿ ಪತ್ರಗಳನ್ನು ಶೀಘ್ರ ವಿತರಿಸುವಂತೆ ಎಸ್‌ಎಫ್‌ಐ ಆಗ್ರಹಿಸಿತು.
ಸಂಘಟನೆಯ ತಾಲೂಕಧ್ಯಕ್ಷ ಜೆ.ಶಿವಕುಮಾರ ಮಾತನಾಡಿ, ಆರ್‌ಟಿಇ ಅಡಿ ಆಯ್ಕೆಯಾದ ವಿದ್ಯಾರ್ಥಿಗಳು ಎಂಟನೆ ತರಗತಿವರೆಗೆ ಆಂಗ್ಲಮಾಧ್ಯಮ ಶಿಕ್ಷಣ ಪಡೆದಿದ್ದಾರೆ. ಒಂಬತ್ತನೆ ತರಗತಿಗೆ ದುಬಾರಿ ಫೀ ಕಟ್ಟಲಾಗದೆ ಪೋಷಕರು ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಕಳಿಸುತ್ತಿದ್ದಾರೆ. 10ನೇ ತರಗತಿವರೆಗೂ ಆರ್‌ಟಿಇ ವಿಸ್ತರಿಸಬೇಕು. 2015ರಲ್ಲಿ ಪರೀಕ್ಷೆ ಬರೆದು ನೇಮಕಗೊಂಡ 1203 ಪಿಯುಸಿ ಉಪನ್ಯಾಸಕರಿಗೆ ನೇಮಕಾತಿ ಆದೇಶ ಪತ್ರ ನೀಡಲು ವಿಳಂಬ ಮಾಡುತ್ತಿರುವುದು ಶೋಭೆಯಲ್ಲ.
ಧರಣಿ ನಿರತ ಉಪನ್ಯಾಸಕರಿಗೆ ಕೋವಿಡ್ ನಿಯಮಗಳ ಹೆಸರಿನಲ್ಲಿ ತೊಂದರೆ ಕೊಡಲು ಹೊರಟಿರುವ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಯನ್ನು ಎಸ್‌ಎಫ್‌ಐ ಸಂಘಟನೆ ಖಂಡಿಸುತ್ತದೆ. ಅವರಿಗೆ ನೇಮಕಾತಿ ಆದೇಶ ಪತ್ರ ನೀಡಿ ಅವರವರ ಗ್ರಾಮಗಳಿಗೆ ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದರು. ಸಂಘಟನೆ ಮುಖಂಡರಾದ ಎಚ್.ಎಂ.ಮಾರುತಿ, ಕೆ.ಎ.ಪವನ್ ಇತರರು ಶಿರಸ್ತೇದಾರ ಶ್ರೀಧರಗೆ ಬುಧವಾರ ಮನವಿ ಸಲ್ಲಿಸಿದರು.