

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಜಿಲ್ಲೆಯ ವಿವಿಧೆಡೆ ಕೃಷಿ ಜಮೀನನ್ನು ಅಕ್ರಮವಾಗಿ ಅಗೆದು ಮರಂ ಸಾಗಣೆ ಮಾಡುವ ದಂಧೆ ನಡೆದಿದೆ.
ಕೃಷಿ ಜಮೀನಿನಲ್ಲಿನ ತಗ್ಗು-ದಿನ್ನೆಗಳನ್ನು ರೈತರೇ ಸಮತಟ್ಟು ಮಾಡಿಕೊಳ್ಳುತ್ತಾರೆ. ಆದರೀಗ ದಂಧೆಕೋರರ ಅಟ್ಟಹಾಸದಿಂದಾಗಿ ಕೃಷಿ ಭೂಮಿ ಕಳೆದುಕೊಳ್ಳುವ ಆತಂಕ ರೈತರಲ್ಲಿ ಕಂಡುಬರುತ್ತಿದೆ. ಒಂದು ಬಾರಿ ಕೃಷಿ ಜಮೀನಿನಲ್ಲಿನ ಮಣ್ಣು ತೆಗೆದರೆ ಅಲ್ಲಿ ಮತ್ತೆ ಕೃಷಿ ಮಾಡಲು ಸಾಧ್ಯವಿಲ್ಲ. ಆದರೆ, ದಂಧೆಕೋರರು ರೈತರಿಗೆ ಹಣದ ಆಮಿಷವೊಡ್ಡಿ ಅನ್ನ ಕೊಡುವ ಭೂಮಿಗೆ ಕನ್ನ ಹಾಕುತ್ತಿದ್ದಾರೆ.
ಹೊಸಪೇಟೆ ಸುತ್ತಮುತ್ತ, ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ ತಾಲೂಕಿನ ಕೆಲವೆಡೆ ಮರಂ ಸಾಗಣೆ ದಂಧೆ ಜೋರಾಗಿ ನಡೆಯುತ್ತಿದೆ. ಹೊಸಪೇಟೆ ತಾಲೂಕಿನಲ್ಲಿ ಅಕ್ರಮವಾಗಿ 10ರಿಂದ 15 ಅಡಿ ಭೂಮಿ ಬಗೆಯಲಾಗುತ್ತಿದೆ. ಕೃಷಿ ಭೂಮಿಯಿಂದಲೇ ಮಣ್ಣು ಲೂಟಿ ಮಾಡುತ್ತಿರುವ ದಂಧೆಕೋರರು ರಾಜಾರೋಷವಾಗಿ ಹಾಡಹಗಲೇ ಮಾರಾಟ ಮಾಡುತ್ತಿದ್ದಾರೆ.
ಒಂದು ಟಿಪ್ಪರ್ ಮರಂಗೆ ಮೂರರಿಂದ ಐದು ಸಾವಿರ ರೂ. ವರೆಗೆ ಸುಲಿಯಲಾಗುತ್ತಿದೆ. ಕೆಂಪು ಮಣ್ಣು ಗಣಿಗಾರಿಕೆಯಿಂದ ಭೌಗೋಳಿಕ ವ್ಯವಸ್ಥೆ ಮೇಲೆ ಭಾರೀ ಪರಿಣಾಮ ಬೀರುವ ಆತಂಕ ಎದುರಾಗಿದೆ. ಕೃಷಿ ಜಮೀನಿನಲ್ಲಿನ ಮರಂ ತೆಗೆದು ಸಮತಟ್ಟು ಮಾಡದೆ ಹಾಗೇ ಬಿಡಲಾಗುತ್ತಿದೆ. ರೈತರು ಕೇಳಿದರೆ ನಂತರ ಸರಿ ಮಾಡಿಕೊಡುವುದಾಗಿ ದಂಧೆಕೋರರು ಸಬೂಬು ಹೇಳುತ್ತಿದ್ದಾರೆ.
ಕೃಷಿ ಜಮೀನಿನಲ್ಲಿನ ಮಣ್ಣು ತೆಗೆಯುವಂತಿಲ್ಲ. ಆದರೆ, ರಾಜಾರೋಷವಾಗಿ ದಂಧೆ ನಡೆದಿರುವುದು ನೋಡಿದರೆ ಅಧಿಕಾರಿಗಳು ದಂಧೆಕೋರರೊಂದಿಗೆ ಕೈ ಜೋಡಿಸಿರುವಂತೆ ಕಂಡುಬರುತ್ತಿದೆ. ಫಲವತ್ತಾದ ಜಮೀನು ಇದ್ದರೂ, ಬಂಜರು, ಯೋಗ್ಯವಲ್ಲದ ಜಮೀನು ಎಂದು ಅಭಿವೃದ್ಧಿ ಹೆಸರಿನಲ್ಲಿ ಮರಂ ಸಾಗಣೆಗೆ ಅನುಮತಿ ನೀಡುತ್ತಿದ್ದಾರೆ. ಮಣ್ಣು ಗಣಿಗಾರಿಕೆ ಅವ್ಯಾಹತವಾಗಿ ನಡೆದಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಕೃಷಿ ಜಮೀನುಗಳನ್ನು ನಿಯಮಾನುಸಾರ ಸಮತಟ್ಟ ಮಾಡಿಕೊಳ್ಳಲು ಅನುಮತಿ ನೀಡಲಾಗುತ್ತದೆ. ಅಕ್ರಮ ನಡೆದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಕವಿತಾ ಎಸ್.ಮನ್ನಿಕೇರಿ ಜಿಲ್ಲಾಧಿಕಾರಿ, ವಿಜಯನಗರ
ಕೃಷಿ ಜಮೀನಿನಲ್ಲಿ ಯಾವುದೇ ಕಾರಣಕ್ಕೂ ಮಣ್ಣು ಗಣಿಗಾರಿಕೆ ಮಾಡುವಂತಿಲ್ಲ. ಕೃಷಿಗೆ ಯೋಗ್ಯವಲ್ಲದ ಜಮೀನಿನಲ್ಲಿ ಇಲಾಖೆಯಿಂದ ಅನುಮತಿ ಪಡೆದ ನಂತರ ಮಣ್ಣು ಸಾಗಣೆ ಮಾಡಬಹುದು. ಅಕ್ರಮ ನಡೆದಿದ್ದರೆ ಕ್ರಮಕೈಗೊಳ್ಳಲಾಗುವುದು. ರಿಯಾಜ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ, ವಿಜಯನಗರ