

ಹೊಸಪೇಟೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯುನ ರೈತ ಮತ್ತು ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ರೈತ ಕೃಷಿ ಕಾರ್ಮಿಕರು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ಮನವಿ ಸಲ್ಲಿಸಿದರು.
ಎನ್.ಎಚ್ 63 ರಸ್ತೆಗಾಗಿ ಗಾದಿಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಲಿತ ಹಾಗೂ ಹಿಂದುಳಿದ ವರ್ಗದ ಜನಸಾಮಾನ್ಯರ ನಿವೇಶನ ಸಹಿತ ಮನೆಗಳನ್ನು 2013ರಲ್ಲಿ ಭೂ-ಸ್ವಾದಿನ ಮಾಡಿದರು. ಆದರೆ 10 ವರ್ಷಗಳಾಗಿದ್ದು, 2024 ರಂತೆ ನಿವೇಶನ ಮತ್ತು ಕಟ್ಟಡ ಸಾಮಗ್ರಿಗಳ ಬೆಲೆಗನುಗುಣವಾಗಿ ಪರಿಹಾರ ನೀಡದೇ ಮತ್ತು ಪುನರ್‌ವಸತಿ ಕಲ್ಪಿಸಿಲ್ಲ. ಆದರು, ರಸ್ತೆ ಅಭಿವೃದ್ಧಿಗೆ ಮುಂದಾಗಿರುವುದು ನ್ಯಾಯಾಂಗದ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ. ಇಲ್ಲಿನ ನಿವಾಸಿಗಳಿಗೆ ನಿವೇಶನ ಸಹಿತ ಮನೆ ಕಟ್ಟಿಕೊಳ್ಳುವುದಕ್ಕೆ ಆರ್ಥಿಕ ಶಕ್ತಿ ಇಲ್ಲ ಎಂದು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳು ಪಂಚಾಯತ್ ಶಾಸನದ ಅಡಿಯಲ್ಲಿ ಅಥವಾ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕವಾಗಲಿ ನಿವಾಸಿಗಳಿಗೆ ನಿವೇಶನ ಮನೆಗಳು ಮಂಜೂರು ಮಾಡಬೇಕು. ಪಿ.ಕೆ.ಹಳ್ಳಿ ಏತನೀರಾವರಿ ಯೋಜನೆಯಲ್ಲಿ ಭೂಸ್ವಾಧಿನ ಪಡೆದ ಜಮೀನಿನ ಪರಿಹಾರ ಈ ವರೆಗೆ ನೀಡಿಲ್ಲ. ಈಗ ಎರಡು ಹಂತಗಳಲ್ಲಿ ಕಾಮಗಾರಿಯನ್ನು ನಡೆಸಿರುವುದು ರೈತರಿಗೆ ಆತಂಕ ಮೂಡಿಸಿದೆ. ಬಡ ರೈತ ಕುಟುಂಬಗಳಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಮರ್ಪಕ ಭೂ ಪರಿಹಾರಕ್ಕಾಗಿ ಸಭೆ ಕರೆದು ಪರಿಹಾರ ಇತ್ಯಾರ್ಥ ಪಡಿಸಬೇಕು ಎಂದು ಒತ್ತಾಯಿಸಿದರು.