ಹೊಸಪೇಟೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು.
ದಿನಾಚರಣೆಯ ಅಂಗವಾಗಿ ಬೆಳಗ್ಗೆ ಜನ ಜಾಗೃತಿ ಜಾಥಾ ನಡೆಯಿತು. ಹೊಸಪೇಟೆಯ ಸರ್ದಾರ್ ಪಟೇಲ್ ಸರ್ಕಾರಿ ಪ್ರೌಢಶಾಲೆಯಿಂದ ಆರಂಭವಾದ ಜಾಥಾ ನಗರದ ವಿವಿಧೆಡೆ ಸಂಚರಿಸಿತು.
ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಹೇಮಲತಾ ಬಿ.ಹುಲ್ಲೂರ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿ ವರ್ಷ ಜೂನ್ 12 ರಂದು ವಿಶ್ವಾದ್ಯಂತ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಿಸಲಾಗುತ್ತಿದೆ. ಅದರಂತೆ ನಾವು ಜಾಗೃತರಾಗಿ ಬಾಲ ಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಬೇಕು. ನಮ್ಮ ಮಕ್ಕಳು ನಮ್ಮ ಆಸ್ತಿಯಾಗಿದ್ದಾರೆ. ಅವರನ್ನು ದುಡಿಮೆಗೆ ಹಚ್ಚದೇ ಅವರಿಗೆ ಸರಿಯಾದ ವಿದ್ಯಾಭ್ಯಾಸ ನೀಡಬೇಕು ಎಂದರು.
ಸಿವಿಲ್ ನ್ಯಾಯಾಧೀಶ ಎಚ್.ಆರ್.ಅಶೋಕ್ ಮಾತನಾಡಿ, ಮಕ್ಕಳು ಕಟ್ಟಡ ಕೆಲಸದಲ್ಲಿ, ಅಂಗಡಿಗಳಲ್ಲಿ, ಬೇಕರಿ, ದೊಡ್ಡ ದೊಡ್ಡ ಮನೆಗಳಲ್ಲಿ ಹಾಗೂ ಇನ್ನೀತರ ಸ್ಥಳಗಳಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕೆಲಸದಾಳುಗಳಾಗಿದ್ದಾರೆ. ಇಂತಹ ಅನಿಷ್ಠ ಬಾಲ ಕಾರ್ಮಿಕ ಪದ್ಧತಿಯ ಪಿಡುಗನ್ನು ಹೋಗಲಾಡಿಸಬೇಕು ಎಂದು ಹೇಳಿದರು.
ಉಪ ವಿಭಾಗದ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಡೊಂಬರಮತ್ತ್ತೂರ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.