ಕನ್ನಡದಲ್ಲಿ ಕೃತಿಗಳ ರಚನೆ ಹೆಚ್ಚಾಗಲಿ: ಹೊಸಪೇಟೆಯಲ್ಲಿ ಸಾಹಿತಿ ಕುಂಬಾರ ವೀರಭದ್ರಪ್ಪ ಹೇಳಿಕೆ

14112021 Hospet writer Kumbara veerabhadrappa
Published on

ಹೊಸಪೇಟೆ: ಸಾಹಿತ್ಯ ಕೃತಿಗಳು ಕವಿಗಳಿಗೆ ಸಾಂತ್ವನ ಕೇಂದ್ರಗಳಿದ್ದಂತೆ ಎಂದು ಸಾಹಿತಿ ಕುಂಬಾರ ವೀರಭದ್ರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಕವಯತ್ರಿ ನೂರ್ ಜಹಾನ್ ರಚಿಸಿದ ‘ಕಾವ್ಯಗೊಂಚಲು’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ಮಾತೃಭಾಷೆಯಲ್ಲಿ ಸಾಹಿತ್ಯ ಬರೆದು ಪ್ರಸಿದ್ಧರಾದವರು ಹೆಚ್ಚು. ಕನ್ನಡದಲ್ಲಿ ಹೆಚ್ಚಿನ ಕೃತಿಗಳನ್ನು ಬರೆಯುವ ಮೂಲಕ ನಾಡಿನ ಭಾಷೆಯನ್ನು ಶ್ರೀಮಂತಗೊಳಿಸಬೇಕು. ಸಾಹಿತ್ಯ ಬರೆಯುವುದರಿಂದ ಸುಖವಾಗಿರಬಹುದು. ಧರ್ಮಗಳನ್ನು ಅನುಮಾನದಿಂದ ನೋಡುವಂತಹ ಸದ್ಯದ ಪರಿಸ್ಥಿತಿಯಲ್ಲಿ ಮುಸ್ಲಿಂ ಮಹಿಳೆ ಕನ್ನಡದಲ್ಲಿ ಪುಸ್ತಕ ಹೊರತಂದಿರುವುದು ಹೆಮ್ಮೆಯ ವಿಷಯ ಎಂದರು.

ಗೋಪಾಲಕೃಷ್ಣ ಅಡಿಗರು ಹೇಳಿದಂತೆ ಏನಾದರೂ ಬರಿ ತಮ್ಮ ಸುಮ್ಮನಿರದೆ ಎಂಬಂತೆ ಸಾಹಿತ್ಯವನ್ನು ಬರೆಯುತ್ತಾ ಹೊರಟವರಿಗೆ ಸಾಮಾಜಿಕ ಓರೆಕೋರೆ ತಿದ್ದುವ ಜತೆಗೆ ಸಮಾಜವನ್ನು ಅರ್ಥೈಸಿಕೊಳ್ಳುವ ಬದ್ಧತೆ ಸಿಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ವೈದ್ಯಾಧಿಕಾರಿ ಸುಲೋಚನಾ, ಸಾಹಿತ್ಯ ಸೃಷ್ಟಿ ಮಗು ಜನನವಿದ್ದಂತೆ. ಮಗು ಭ್ರೂಣಾವಸ್ಥೆಯಲ್ಲಿ ಇರುವಂತೆ ಸಾಹಿತಿಗೆ ಕಾವ್ಯ ಮೂಡಬೇಕು. ಒಮ್ಮೆ ಬರೆದ ನಂತರ ಹಲವು ಬಾರಿ ತಿದ್ದುತ್ತಲೆ ಇರಬೇಕು. ಆಗ 9 ತಿಂಗಳಲ್ಲಿ ಮಗು ಜನಿಸಿದಂತೆ ಸಾಹಿತ್ಯ ರಚನೆಯಾಗುತ್ತದೆ ಎಂದರು. ಕವಯತ್ರಿ ನೂರ್ ಜಹಾನ್, ಸಿಕಂದರ್ ಪುಸ್ತಕ ಪರಿಚಯ ಮಾಡಿಕೊಟ್ಟರು. ಪ್ರಮುಖರಾದ ಅಬ್ದುಲ್ ಹೈ, ಜೈನುಲ್ಲಾ, ಕಲ್ಲಂ ಭಟ್, ಸುಜಾತಾ, ದಯಾನಂದ್ ಕಿನ್ನಾಳ, ಪಿ.ಅಬ್ದುಲ್ಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net