

ಹೊಸಪೇಟೆ: ಸಾಹಿತಿ ಕುಂ ವೀರಭದ್ರಪ್ಪ ಅವರ ಕುಬುಸ ಕಥೆ ಆಧಾರಿತ ಕುಬುಸ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಎಂದು ಕನ್ನಡ ಕಲಾ ಸಂಘದ ಕಾರ್ಯದರ್ಶಿ ಎಸ್.ಎಸ್.ಚಂದ್ರಶೇಖರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಭವನದಲ್ಲಿ ಭಾನುವಾರ ಮಾತನಾಡಿದ ಅವರು, ಈ ಚಿತ್ರದಲ್ಲಿ ಬಹುತೇಕ ವಿಜಯನಗರ ಜಿಲ್ಲೆಯ ಕಲಾವಿದರು ನಟಿಸಿದ್ದಾರೆ. ಖ್ಯಾತ ಕಲಾವಿದ ದುರ್ಗಾದಾಸ್ ಅವರ ಪುತ್ರಿ ಹನುಮಕ್ಕ ಮುಖ್ಯ ಭೂಮಿಕೆಯಲ್ಲಿದ್ದು ಅಮೋಘವಾಗಿ ನಟಿಸಿದ್ದಾರೆ. ಪ್ರತಿಯೊಬ್ಬರೂ ಈ ಚಿತ್ರಕ್ಕೆ ಜೀವ ತುಂಬಿದ್ದು, ಕುಟುಂಬ ಸಮೇತವಾಗಿ ಕುಳಿತು ನೋಡುವಂತ ಚಿತ್ರವಾಗಿದೆ. ಚಿತ್ರ ಮಂದಿರದಲ್ಲಿ ಕನ್ನಡ ಚಿತ್ರ ಪ್ರೇಮಿಗಳು ವೀಕ್ಷಣೆ ಮಾಡುವ ಮೂಲಕ ಕುಬುಸ ಚಿತ್ರವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಉತ್ತಮ ಕಥೆ ಅಂದರ ಹೊಂದಿರುವ ಕುಬುಸ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದರೂ, ಚಿತ್ರಮಂದಿರಗಳಲ್ಲಿ ಕೇವಲ ಎರಡು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ಕನ್ನಡ ಚಿತ್ರಗಳನ್ನು ಕಡೆ ಗಣಿಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಕಥೆ ಆಧಾರಿತ ಸಿನಿಮಾ ಎಂದು ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ಸಿಕ್ಕಿಲ್ಲ. ಅದರಲ್ಲಿಯೂ ಹೊಸಪೇಟೆ ನಗರದ ಸರಸ್ವತಿ ಚಿತ್ರಮಂದಿರದಲ್ಲಿ ಎರಡು ಪ್ರದರ್ಶನಕ್ಕೆ ಮಾತ್ರ ಅವಕಾಶ ನೀಡಿದ್ದಾರೆ. ಈ ಧೋರಣೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ, ಹಿರಿಯ ರಂಗಕಲಾವಿದೆ ನಾಗರತ್ಮಮ್ಮ, ಸಮಾಜ ಸೇವಕಿ ಕವಿತಾ ಈಶ್ವರ ಸಿಂಗ್, ಚಿತ್ರದ ನಿರ್ದೇಶಕ ಅಡ್ಡ ರಮೇಶ್, ನಿರ್ಮಾಪಕಿ ವಿ.ಶೋಭಾ, ಕಾರ್ಯಕಾರಿ ನಿದೇರ್ಶಕಿ ಭಾರತಿ ಗುಂಡಿ ರಮೇಶ್, ನಾಯಕ ನಟ ನಟರಾಜ್ ಎಸ್.ಭಟ್ ಇತರರಿದ್ದರು.