ಮುಷ್ಕರಕ್ಕೆ ದೊರೆಯದ ಉತ್ತಮ ಪ್ರತಿಕ್ರಿಯೆ

Oplus_131072
Oplus_131072
Published on

ಹೊಸಪೇಟೆ: ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ನಡೆದ ಸಿಬ್ಬಂದಿ ಮುಷ್ಕರಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗದೆ, ಶೇ 87ರಷ್ಟು ಬಸ್ ಸಂಚಾರ ನಡೆಸಿದವು. ಜಿಲ್ಲೆಯಲ್ಲಿ ಸಂಚರಿಸುವ ಜನ ಸಾಮಾನ್ಯರಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ಹೊರ ಜಿಲ್ಲೆಗೆ ಹೋಗುವ ಪ್ರಯಾಣಿಕರು ಪರದಾಡಿದರು.

ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಬಂದ್ ಇದೆ ಎನ್ನುವುದನ್ನು ತಿಳಿದು ಬಹಳಷ್ಟು ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ನಗರದದಿಂದ ಬಳ್ಳಾರಿ, ಹುಲಿಗಿ, ಸಿಂಧನೂರು, ಹರಿಹರ ಕಡೆ ಎಂದಿನಂತೆ ಸಂಚರಿಸಿದವು. ಅದೇ ಪ್ರಕಾರ ಇಂದೂ ಸಹ ನಿತ್ಯದಂತೆ ಬಸ್ ಸಂಚಾರ ವಿದೆ. ನಗರದ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ನಗರ ಸೇರಿದಂತೆ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹೂವಿನಹಡಗಲಿ, ಹರಪನಹಳ್ಳಿ ಹೀಗೆ ಜಿಲ್ಲೆಯ ವಿವಿಧ ಕಡೆಗಳಿಗೆ ಬಸ್ ಗಳು ಮುಖ ಮಾಡಿದವು. ಜಿಲ್ಲೆಯಿಂದ ಶೇ 87ರಷ್ಟು ಬಸ್ ಗಳು ಕಾರ್ಯಾಚರಣೆ ಗೆ ಇಳಿದಿವೆ. ಜಿಲ್ಲೆಯಲ್ಲಿ ಶೇ.90ರಷ್ಟು ಬಸ್ ಸಂಚಾರ ಮಾಡಿವೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ಕೆಕೆಆರ್ ಟಿಸಿ‌  ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮರೆಡ್ಡಿ ಹೀರಾ ತಿಳಿಸಿದರು.

ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಗಾಗಿ 98 ಖಾಸಗಿ ಬಸ್ ಗಳು ಹಾಗೂ ಸಾವಿರ ಇತರೆ ವಾಹನಗಳನ್ನು ಬಳಸಿಕೊಳ್ಳಲು ಮುಂದಾಗಿತ್ತು.‌ ಆದರೆ ಬೆಳಗ್ಗೆಯಿಂದ ಕೆಎಸ್ ಆರ್ ಟಿಸಿ ಬಸ್ ಗಳೇ ಚಾಲನೆಯಲ್ಲಿವೆ. ಜಿಲ್ಲೆಯ ಐದು ಘಟಗಳಿಂದ ಬಸ್ ನಿಲ್ದಾಣದಿಂದ ಎಲ್ಲ ಬಸ್ ಗಳು ಎಂದಿನಂತೆ ಸಂಚಾರ ನಡೆಸಿದರೆ, ಹೊರ ಜಿಲ್ಲೆಗೆ ಹೋಗುವ ಬಸ್ ಗಳು ಮುಂದೆ ಸಮಸ್ಯೆ ಆಗಬಹುದೆಂಬ ಕಾರಣಕ್ಕೆ ದಾರಿಮಧ್ಯೆಯ ನಿಲ್ದಾಣಗಳಲ್ಲಿ ಸಂಚಾರ ಸ್ಥಗಿತಗೊಳಿಸಿವೆ. ಹೊರ ಜಿಲ್ಲೆಗಳಿಂದ ಬರುವ ಕೆಲವು ಬಸ್ ಗಳು ಜಿಲ್ಲೆಗೆ ಬಾರದೇ ಇರುವುದರಿಂದ ಸಾಕಷ್ಟು ಪ್ರಯಾಣಿಕರಿಗೆ ಸಮಸ್ಯೆಯಾಯಿತು. ನಗರದಲ್ಲಿ ಜಿಲ್ಲೆಯೊಳಗಿನ ಸರ್ಕಾರಿ ಬಸ್ ಸಂಚಾರ ಎಂದಿನಂತೆ ಮುಂದುವರಿದಿದ್ದರೆ, ಬೆಂಗಳೂರು ಸಹಿತ ಬೇರೆ ಜಿಲ್ಲೆಗಳಿಗೆ ತೆರಳುವ ಬಸ್ ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಮುಷ್ಕರದ ಹಿನ್ನೆಲೆಯಲ್ಲಿ ನಿಲ್ದಾಣಗಳಲ್ಲಿ ಕೆಎಸ್ಆರ್ಪಿ, ಡಿಎಆರ್ ತುಕಡಿಗಳನ್ನು ನಿಯೋಜಿಸಿ ಭದ್ರತೆ ಒದಗಿಸಲಾಗಿತ್ತು.

ಹೊಸಪೇಟೆಯ ಸಾರಿಗೆ ಡಿಪೋಗೆ ಸೇರಿದ ಬಸ್ ಗೆ ಹುಬ್ಬಳ್ಳಿಯಲ್ಲಿ ನಡೆದ ಕಲ್ಲು ತೂರಾಟ ಹಿನ್ನೆಲೆ ಪೊಲೀಸರು, ಆರ್.ಟಿ‌.ಒ., ಕೆ ಕೆ ಆರ್ ಟಿಸಿ ಸಿಬ್ಬಂದಿಗಳು  ಸ್ಥಳದಲ್ಲೇ ಮೊಕ್ಕಾಂ ಹೂಡಿದರು. ಜಿಲ್ಲೆಯಲ್ಲಿ ಪೊಲೀಸರು ಅಲರ್ಟ್ ಆಗಿ ಎಲ್ಲಾ ಬಸ್ ನಿಲ್ದಾಣಗಳಿಗೆ ಪೊಲೀಸ್ ಬೀಗಿ ಭದ್ರತೆ ಒದಗಿಸಲಾಗಿತ್ತು. ಬಸ್ ನಿಲ್ದಾಣದಲ್ಲಿರೋ ಬಸ್ ಗಳು, ಪ್ರತಿಯೊಂದು ಬಸ್ ಗಳ ವಿಡಿಯೋ ರೇಕಾರ್ಡ್ ಮಾಡಿದರು.

ಖಾಸಗಿ ವಾನಗಳ ಪೈಪೋಟಿ

ಮುಷ್ಕರ ಹಿನ್ನೆಲೆ ಖಾಸಗಿ ಬಸ್ ಗಳು, ಟೆಂಪೊ, ಆಟೋ ಚಾಲಕರ ಪೈಪೋಟಿ ನಡೆಸಿದರು. ಬಸ್ ನಿಲ್ದಾಣದ ಬಳಿ ಬಂದು ಪ್ರಾಯಾಣಿಕರಿಗೆ ಕೂಗಿದರು. ಖಾಸಗಿ ಬಸ್ ಚಾಲಕರ ವಿರುದ್ಧ ಸ್ಥಳೀಯರ ಟೆಂಪೋ ಹಾಗೂ ಆಟೋ ಚಾಲಕರು ಕೆಂಡಮಂಡಲರಾದರು. ನಾವು ಬೆಳಗ್ಗೆಯಿಂದ ನಿಂತಿದ್ದೇವೆ, ನಮಗೆ ಪ್ಯಾಸೆಂಜರ್ ಬರುತ್ತಿಲ್ಲ ಎಂದು ವಾದಕ್ಕೆ ಇಳಿದರು. ಆರ್ ಟಿಒ ಪರವಾನಿಗೆ ಇದೆ ನಮಗೆ ಎಂದು ಹೇಳ್ತಾರೆ ಖಾಸಗಿ ಬಸ್ ನವರು ವಾದ ಮಾಡಿದರು.

ಎಸ್ಪಿ‌ ಭೇಟಿ ಪರಿಶೀಲನೆ

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ನಗರದ ಬಸ್ ನಿಲ್ದಾಣಕ್ಕೆ ವಿಜಯನಗರ ಎಸ್ಪಿ ಅರುಣಾಂಷ್ಕು ಗಿರಿ ಭೇಟಿ ಪರಿಶೀಲನೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯ ನಮ್ಮಲ್ಲಿ ಯಾವುದೇ ರೀತಿಯಲ್ಲಿ ಸಮಸ್ಯೆಯಾಗಿಲ್ಲ. ವಿಜಯನಗರ ಜಿಲ್ಲೆಯಾದ್ಯಾಂತ ಭದ್ರತೆಗಾಗಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ವಿಜಯನಗರ ಜಿಲ್ಲೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net