

ಹೊಸಪೇಟೆ: ಈ ವರ್ಷದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಕೆಆರ್ ಡಿಬಿಯಿಂದ ರೂ. 348 ಕೋಟಿ ನೀಡಲಾಗಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರದಿಂದ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಕೆಅರ್‌ಡಿಬಿಗೆ ಸುಮಾರು 5 ಸಾವಿರ ಕೋಟಿ ರೂ.ಗಳ ಅನುದಾನ ನೀಡಿರುವುದು ಹೆಮ್ಮೆಯಾಗಿದೆ. ಕೆಕೆಆರ್‌ಡಿಬಿಯಿಂದ ಬಿಡುಗಡೆಯಾದ ಅನುದಾನವನ್ನು ಯಾವ ಉದ್ದೇಶಕ್ಕೆ ಬಿಡುಗಡೆ ಮಾಡಲಾಗಿದೆ, ಅದೇ ಯೋಜನೆಗಾಗಿ ವಿನಿಯೋಗವಾಗಬೇಕು. ಆದರೆ, ಬೇರೆ ಕಾಮಗಾರಿಗಳಿಗೆ ವರ್ಗಾಯಿಸಿದರೇ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದು ಖಚಿತ ಎಂದು ಎಚ್ಚರಿಕೆ ನೀಡಿದರು.
ವಿಜಯನಗರ ಜಿಲ್ಲೆಗೆ ಈ ವರ್ಷ ಮೈಕ್ರೋ ಯೋಜನೆಯಡಿ ರೂ.226 ಕೋಟಿ ರೂ. ಹಾಗೂ ಮ್ಯಾಕ್ರೋ ಯೋಜನೆಯಡಿ ರೂ.122 ಕೋಟಿ ಅನುದಾನ ಒದಗಿಸಲಾಗಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿಗೆ 38 ಕೋಟಿ ರೂ, ಹೂವಿನಹಡಗಲಿಗೆ 46 ಕೋಟಿ ರೂ, ಹೊಸಪೇಟೆಗೆ 12 ಕೋಟಿರೂ, ಕೂಡ್ಲಿಗಿಗೆ 62 ಕೋಟಿ, ಹರಪನಹಳ್ಳಿಗೆ 67 ಕೋಟಿ ರೂ.ಗಳು ಅನುದಾನ ನೀಡಲಾಗಿದೆ. ಮುಂದಿನ ಮೂರು ವರ್ಷದಲ್ಲಿ ಸುಮಾರು 11 ಸಾವಿರ ಕೋಟಿ ರೂ. ಅನುದಾನ ತರುವ ಮೂಲಕ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮುನ್ನುಡಿ ಹಾಕಿದ್ದೇವೆ. ಈ ಭಾಗದಲ್ಲಿ ಶಿಕ್ಷಣ, ಆರೋಗ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಉದ್ದೇಶ ಹೊಂದಲಾಗಿದೆ. ವಿಜಯನಗರ ಜಿಲ್ಲೆ ಹಿಂದಿನ ಭಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 27 ನೇ ಸ್ಥಾನ ಪಡೆದಿತ್ತು. ಈ ಬಾರಿ ಯಾವುದೇ ಕಾರಣ ಹೇಳದೇ ಉತ್ತಮ ಫಲಿತಾಂಶ ನೀಡಬೇಕಿದೆ ಎಂದರು.
ಕೆಕೆಆರ್‌ಡಿಬಿ ಮಂಡಳಿ ಕಾರ್ಯದರ್ಶಿ ಸುಂದರೇಶ್ ಬಾಬು ಮಾತನಾಡಿ, ಜಿಲ್ಲಾಮಟ್ಟದ ಅಧಿಕಾರಿಗಳು ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಕಾಮಗಾರಿ ಸ್ಥಿತಿಗತಿಗಳನ್ನು ಅವಲೋಕಿಸಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಅನುದಾನ ಸದ್ಭಳಕೆಯಲ್ಲಿ ಹಿಂದುಳಿದರೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.