

ಹೊಸಪೇಟೆ: ಬಲವಂತದ ಕೆಐಎಡಿಬಿ ಭೂ ಸ್ವಾಧೀನ ರದ್ದುಪಡಿಸುವಂತೆ ಆಗ್ರಹಿಸಿ ಜೂ.25ರಂದು ರೈತರು ರಾಜ್ಯಾದ್ಯಂತ ದೇವನಹಳ್ಳಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಸಂಚಾಲಕ ಗೋಣಿ ಬಸಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಚನಭ್ರಷ್ಟ ಸರ್ಕಾರ ಆಡಳಿತ ನಡೆಸುತ್ತಿದೆ. ಪಂಚೆದ್ರೀAಯ ಇಲ್ಲದ ಸರ್ಕಾರ ಇದಾಗಿದೆ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ಬಲವಂತವಾಗಿ ಕೆಐಎಡಿಬಿ ಮೂಲಕ ಸ್ವಾಧೀನಕ್ಕೆ ಮುಂದಾಗಿರುವುದು ರಾಜ್ಯ ಸರ್ಕಾರದ ಹೇಡಿತನದ ಕೃತ್ಯ ಆಗಿದೆ. ಸರ್ಕಾರ ಹೊರಡಿಸಿರೋ ಅಧಿಸೂಚನೆಯನ್ನ ವಾಪಸ್ ಪಡೆಯಬೇಕು ಅಂತ ಆಗ್ರಹಿಸಿದರು.
ಇದು ನಿರ್ಣಾಯಕ ಹೋರಾಟವಾಗಿದ್ದು ಸರ್ಕಾರ ಈ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡುವ ತನಕ ಹಿಂದೆಸರಿಯದೆ ಮುಂದುವರೆಯಲಿದೆ. ಅನಿರ್ಧಿಷ್ಟ ಹೋರಾಟಕ್ಕೆ ಸಜ್ಜಾಗಿ ರಾಜ್ಯದ ಎಲ್ಲಾ ಸಂಘಟನೆಗಳ ಮುಂದಾಳುಗಳು, ಕಾರ್ಯಕರ್ತರು ಹಾಗೂ ನಾಗರಿಕರು ಹೋರಾಟನಿರತ ರೈತರ ಜತೆಗೂಡಲು ದೇವನಹಳ್ಳಿಗೆ ಹೊರಡುತ್ತಿದ್ದೇವೆ ಎಂದರು.
ಕಳೆದ 1,180 ದಿನಗಳಿಂದ ಅಂದರೆ ಸುಮಾರು ನಾಲ್ಕು ವರ್ಷಗಳಿಂದ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ನಾಡ ಕಚೇರಿ ಮುಂದೆ ಅನಿರ್ದಿಷ್ಟ ಪ್ರತಿಭಟನೆ ನಡೆಸುತ್ತಿದ್ದಾರೆ. ಶೇಕಡಾ 80 ರಷ್ಟು ರೈತರು ಲಿಖಿತವಾಗಿ ಭೂ ಸ್ವಾಧೀನಕ್ಕೆ ತಮ್ಮ ಅಸಮ್ಮತಿ ಹಾಗೂ ವಿರೋಧವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರೂ, ಬಲವಂತದ ಭೂ ಸ್ವಾಧೀನಕ್ಕೆ ಕ್ರಮವಹಿಸಿರುವುದು, ಭೂ ಸ್ವಾಧೀನ ಕಾಯ್ದೆ-2013ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು.
ಹೋರಾಟಗಾರರು ಹಸಿರು ಶಾಲು ಹಾಕಿದವರೆಲ್ಲರೂ ಪ್ರಾಮಾಣಿಕವಾಗಿ ಇಲ್ಲ. ಕೆಲವರು ವಸೂಲಿಗಾರರಾಗಿದ್ದಾರೆ. ತಮ್ಮ ಸ್ವಾರ್ಥಕ್ಕಾ ಸರ್ಕಾರದಲ್ಲಿ ಬಜೆಟ್ ಮಂಜೂರು ಮಾಡಿಕೊಂಡು ಬರ್ತಿದ್ದಾರೆ. ವಿಜಯನಗರ ಉಸ್ತುವಾರಿ ಸಚಿವರು ಏನೂ ಕೆಲಸ ಮಾಡುತ್ತಿಲ್ಲ. ಬಂದೇ ಪುಟ್ಟ, ಹೋದೆ ಪುಟ್ಟ ಅನ್ನೋ ಸ್ಥಿತಿಗೆ ಬಂದಿದ್ದಾರೆ ಎಂದು ಆಗ್ರಹಿಸಿದರು. ಮುಖಂಡರಾದ ಗಂಟೆ ಸೋಮಶೇಖರ, ಹರಟೆ ಕಾಳಪ್ಪ, ನಾಗೇಂದ್ರಪ್ಪ, ಎಚ್.ನಾಗರಾಜ್ ಇತರರಿದ್ದರು.