

ರಾಯಚೂರು: ತಾಲೂಕಿನ ಹೊಸಪೇಟೆಯ ಕೆಂಪಿನಮಠದ ನೂತನ ಪೀಠಾಕಾರಿಯಾಗಿ ಚಂದ್ರಶೇಖರ ದೇವರನ್ನು ನೇಮಕ ಮಾಡಿ ಸೋಮವಾರ ಧಾರ್ಮಿಕ ವಿ ವಿಧಾನಗಳನ್ನು ಪೂರೈಸಲಾಯಿತು.
ಕಾಯಕ್ರಮದ ಸಾನ್ನಿಧ್ಯ ವಹಿಸಿದ್ದ ಒಳಬಳ್ಳಾರಿ ಸುವರ್ಣಗಿರಿ ಮಠದ ಸಿದ್ಧಲಿಂಗ ಸ್ವಾಮೀಜಿ ನೂತನ ಸ್ವಾಮೀಜಿಯ ಹೆಸರು ಘೋಷಣೆ ಮಾಡಿದ ನಂತರ ಮಾತನಾಡಿ, ಕೆಂಪಿನಮಠ ಈ ಭಾಗದಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳ ಜತೆಗೆ ಭಕ್ತರ ಮನದಲ್ಲಿನ ಮಾಲೀನ್ಯವನ್ನು ಕಳೆಯುವ ಕೆಲಸವನ್ನು ಮಾಡುತ್ತಾ ಬಂದಿದೆ.
ಮಠದ ಪರಂಪರೆಯಲ್ಲಿ ಕೆಂಪಿನಮಠ ದಾಸೋಹದ ಜತೆಗೆ ಶಿವಯೋಗದ ಶಕ್ತಿಯನ್ನು ಬೆಳೆಸಿಕೊಂಡಿದೆ. ಇಂತಹ ಭವ್ಯ ಪರಂಪರೆಯನ್ನು ನೂತನ ಪೀಠಾಕಾರಿಯಾಗಿ ಚಂದ್ರಶೇಖರ ದೇವರು ಮುಂದುವರಿಸಿಕೊಂಡು ಹೋಗುವ ಭರವಸೆಯಿದೆ ಎಂದರು.
ಇದಕ್ಕೂ ಮೊದಲು ನೂತನ ಪೀಠಾಪತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾರೋಟಿನಲ್ಲಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಂತೆಕೆಲ್ಲೂರಿನ ಘನಮಠೇಶ್ವರ ಸ್ವಾಮೀಜಿ, ನಿರಡಗುಂಬದ ಸಿದ್ಧಲಿಂಗ ಮಹಾಸ್ವಾಮೀಜಿ, ಗ್ರಾಮದ ಮುಖಂಡರಾದ ಶರಣಪ್ಪಗೌಡ ಪೊಲೀಸ್ ಪಾಟೀಲ್, ಪಿ.ಬಿ.ಪಾಟೀಲ್, ಭೋಜನಗೌಡ ಮಾಲಿಪಾಟೀಲ್, ವಿಜಯಕುಮಾರ ಮಾಲಿಪಾಟೀಲ್, ಡಾ.ಅಮರಜೀತ್ ಮಾಲಿಪಾಟೀಲ್, ಅನಿಲಕುಮಾರ ಮಾಲಿಪಾಟೀಲ್, ಮಹಾದೇವಪ್ಪ ದಳಪತಿ, ಲಿಂಗಪ್ಪ ಕುರಬರ, ಮಲ್ಲಪ್ಪ ಯಾದವ, ಮಲ್ಲೇಶ ಉಪಸ್ಥಿತರಿದ್ದರು.