

ಹೊಸಪೇಟೆ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳಪೆ ಸಾಧನೆ, ಉದ್ಯೋಗ ಸೃಷ್ಟಿ, ಕುಡಿವ ನೀರಿನ ಸಮಸ್ಯೆ ಸೇರಿ ವಿವಿಧ ವಿಷಯಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸಿಎಂ ಪ್ರಶ್ನೆಗಳಿಗೆ ಸಮರ್ಪಕ ಮಾಹಿತಿ ನೀಡಲು ಅಧಿಕಾರಿಗಳು ತಡವರಿಸಿದರು. ಈ ವೇಳೆ ಸಿದ್ದರಾಮಯ್ಯ ಅವರು, ಕಥೆ ಎಲ್ಲ ಹೇಳಬೇಡಿ, ನೀವು ಬಂದಾಗಿನಿಂದ ಏನು ಅಭಿವೃದ್ಧಿ ಮಾಡಿದ್ದೀರೆಂದು ಕೆಂಡಾಮಂಡಲವಾದರು. ಕುಡಿವ ನೀರು, ಮೇವು, ನರೇಗಾ ಯೋಜನೆಗೆ ಯಾವ ಕಾರಣಕ್ಕೂ ತೊಂದರೆ ಆಗಬಾರದು. ಪಿಡಿ ಖಾತೆಯಲ್ಲಿರುವ ಹಣವನ್ನು ಸರಿಯಾಗಿ ಬಳಸಬೇಕು. ಕೆರೆ ಒತ್ತುವರಿಯಾಗಿದ್ದರೆ ಮುಲಾಜಿಲ್ಲದೆ ತೆರವುಗೊಳಿಸಬೇಕು. ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಕೊರತೆಯಾಗುತ್ತದೆ. ನರೇಗಾದಡಿ ಕೆರೆ ಹೂಳು ತೆಗೆದು ಕೆರೆಗಳಿಗೆ ಮರು ಜೀವ ಒದಗಿಸಬೇಕು ಎಂದು ಸೂಚಿಸಿದರು.
ಪಿಡಿಒಗಳ ಮೂಲಕ ಮನೆ ಮನೆ ಸಮೀಕ್ಷೆ ಮಾಡಿ ಎಷ್ಟು ಮನೆಗಳಲ್ಲಿ ಶೌಚಗೃಹಗಳಿಲ್ಲ. ಅವರು ಏಕೆ ಅರ್ಜಿ ಸಲ್ಲಿಸುತ್ತಿಲ್ಲ? ಎಷ್ಟು ಶೌಚಗೃಹಗಳ ಅಗತ್ಯವಿದೆ ಎಂಬುದರ ಮಾಹಿತಿ ನೀಡಬೇಕು ಎಂದ ಸೂಚಿಸಿದ ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ಈವರೆಗೆ ಎಷ್ಟು ಅರ್ಜಿಗಳು ಬಂದಿವೆ? ಜಿಲ್ಲೆಯಲ್ಲಿ ಶೌಚಗೃಹ ಇಲ್ಲದ ಮನೆಗಳಿವೆಯೇ ಎಂದು ಪ್ರಶ್ನಿಸಿದರು. ಇವೆ ಎಂದು ಅಧಿಕಾರಿಗಳು ಉತ್ತರಿಸಿದರು. ಹೀಗಿದ್ದೂ ಜಿಲ್ಲೆಯನ್ನು ಶೌಚಮುಕ್ತ ಜಿಲ್ಲೆ ಎಂದು ಘೋಷಿಸಿದ್ದು ಏಕೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ನೀವು ಕೊಡುವ ತಪ್ಪು ವರದಿಯನ್ನು ಅಧಿವೇಶನದಲ್ಲಿ ಹೇಳಲು ಆಗುತ್ತದೆಯೇ ಎಂದು ಕಿಡಿಕಾರಿದರು. ಮುಂದಿನ ಸಭೆಯೊಳಗೆ ಸಮೀಕ್ಷೆ ಮುಗಿಸಿ ಶೌಚಗೃಹಗಳು ನಿರ್ಮಾಣ ಆಗಿರಬೇಕು ಎಂದು ತಾಕೀತು ಮಾಡಿದರು.
ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಿಎಂ ಅವರು, ರೈತರಿಗೆ ಅಗತ್ಯವಾದ ಬೀಜ, ರಸಗೊಬ್ಬರ, ಕೀಟನಾಶಕ ಸೇರಿ ಇತರ ಮಾಹಿತಿ ಪಡೆದರು. ಒಮ್ಮೆ ಕೊಟ್ಟ ಬೀಜ ಮೊಳಕೆಯೊಡೆಯದಿದ್ದರೆ ಎರಡನೇ ಸುತ್ತು ಕೂಡ ಬೀಜಗಳನ್ನು ಕಡ್ಡಾಯವಾಗಿ ರೈತರಿಗೆ ವಿತರಿಸಬೇಕು. ರೈತರಿಂದ ದೂರು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತ ಎಂದು ಎಚ್ಚರಿಸಿದರು. ವಿವಿಧ ಇಲಾಖೆಗಳ ಕುರಿತು ಚರ್ಚಿಸಿದ ಸಿಎಂ ಯಾವುದೇ ಕಾರಣಕ್ಕೂ ಜನರನ್ನು ಕಚೇರಿಗಳಿಗೆ ಅಲೆದಾಡಿಸಬೇಡಿ. ವಿಳಂಬ, ಭ್ರಷ್ಟಾಚಾರಕ್ಕೆ ಸಮವಾಗಿರುವುದರಿಂದ ಕಾಲಮಿತಿಯೊಳಗೆ ಕೆಲಸಗಳನ್ನು ಮುಗಿಸಬೇಕು ಎಂದು ಸೂಚನೆ ನೀಡಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಎಚ್.ಆರ್.ಗವಿಯಪ್ಪ, ಜೆ.ಎನ್.ಗಣೇಶ್, ಎಂ.ಪಿ.ಲತಾ, ಡಾ.ಎನ್. ಟಿ. ಶ್ರೀನಿವಾಸ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಇತರರಿದ್ದರು.
ಗ್ಯಾರಂಟಿ ಯೋಜನೆಗಳನ್ನು ಎಂದಿಗೂ ನಿಲ್ಲಿಸುವುದಿಲ್ಲ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಅನುಷ್ಠಾನಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ಈ ಹಿಂದೆ 2007-08ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ 7512 ದೇವದಾಸಿಯರಿದ್ದಾರೆ ಎಂದು ಗುರುತಿಸಲಾಗಿದೆ ಎನ್ನುವ ವರದಿ ಇದೆ. ದೇವದಾಸಿ ಪದ್ಧತಿ ಜಿಲ್ಲೆಯಲ್ಲಿ ಸಂಪೂರ್ಣ ತೊಲಗಬೇಕು. 4680 ವಿಮುಕ್ತ ದೇವದಾಸಿ ಯರಿಗೆ ಕೂಡಲೇ ವಸತಿ ಸೌಕರ್ಯ ಕಲ್ಪಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ವೇತಾಗೆ ಸಿಎಂ ಸೂಚನೆ ನೀಡಿದರು.
ಕಳೆದ ವರ್ಷ ಜಿಲ್ಲೆಯಲ್ಲಿ 34 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾಲಿನಲ್ಲಿ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ರೈತರ ಕುಟುಂಬಕ್ಕೆ ಪರಿಹಾರ ದೊರಕಿದೆಯೇ ಎಂದು ಸಿಎಂ ಪ್ರಶ್ನಿಸಿದರು. ಬಹುತೇಕ ರೈತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಐದು ರೈತರ ಕುಟುಂಬಕ್ಕೆ ಮಾತ್ರ ತಾಂತ್ರಿಕ ತೊಂದರೆ ಆಗಿದ್ದು ಏಕೆ? ಎಫ್‌ಎಸ್‌ಎಲ್ ವರದಿ 20 ದಿನದೊಳಗೆ ಬರುತ್ತದೆ. ಆದರೂ ಪ್ರಕ್ರಿಯೆ ತಡವಾಗಿದ್ದಕ್ಕೆ ಗರಂ ಆದ ಸಿದ್ದರಾಮಯ್ಯ, ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ರೈತರ ಬದುಕಿನ ಜತೆ ಚೆಲ್ಲಾಟ ಆಡಿದರೆ ಹುಷಾರ್ ಎಂದು ಎಚ್ಚರಿಸಿದರು.