ತಪ್ಪು ಕಲ್ಪನೆಗಳಿಂದ ಹೊರಬಂದು ಸಂಗೀತ ಕಲಿಸಿ

kannada vv music
ಕನ್ನಡ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಸ್ವಾಗತ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಲಲಿತಕಲಾ ನಿಕಾಯದ ಡೀನ್ ಡಾ.ಶಿವಾನಂದ ಎಸ್.ವಿರಕ್ತಮಠ, ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ ಯತಗಲ್, ಅಧ್ಯಾಪಕ ಡಾ.ತಿಮ್ಮಣ್ಣ ಭೀಮರಾಯ, ಕಲಾವಿದ ಯಲ್ಲಪ್ಪ ಭಂಡಾರಿ ಇತರರಿದ್ದರು.
Published on

ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯವನ್ನು ಡಾ.ಚಂದ್ರಶೇಖರ ಕಂಬಾರರು ಜಾತ್ಯತೀತವಾಗಿ ರೂಪಿಸಿದ್ದಾರೆ ಎಂದು ಲಲಿತಕಲಾ ನಿಕಾಯದ ಡೀನ್ ಡಾ.ಶಿವಾನಂದ ಎಸ್.ವಿರಕ್ತಮಠ ಹೇಳಿದರು.

ಕನ್ನಡ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಮೊದಲನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಪ್ಪು ಕಲ್ಪನೆಗಳಿಂದ ಹೊರಬಂದು ಪಾಲಕರು ಮಕ್ಕಳನ್ನು ಸಂಗೀತ ಕಲಿಯಲು ಕಳಿಸಬೇಕು. ಯಾವುದೇ ತಾರತಮ್ಯವಿಲ್ಲದೆ ಸಂಗೀತ ಕಲಿಯಲು ಬಹಳ ಅವಕಾಶಗಳಿವೆ. ಸಂಗೀತಕ್ಕಿರುವ ಅದ್ಭುತವಾದ ಚೈತನ್ಯದೊಂದಿಗೆ ವಿದ್ಯಾರ್ಥಿಗಳು ಅನುಸಂಧಾನ ಮಾಡಬೇಕು ಎಂದರು.

ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ ಯತಗಲ್ ಮಾತನಾಡಿ, ಪ್ರಸ್ತುತ ಕೆಲಸ ಮಾಡುವ ಸ್ಥಳದಲ್ಲಿ ನೆಮ್ಮದಿ ಸಿಗಬೇಕೆಂದರೆ ಸಂಗೀತ ಕೇಳಬೇಕಾದ ಅಗತ್ಯವಿದೆ. ಸಂಗೀತದಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ವಿದ್ಯಾರ್ಥಿಗಳು ಜಾತಿ, ಧರ್ಮ ಮೀರಿ ಬೆಳೆಯಬೇಕು. ಸಂಸ್ಥೆಯ ನಿಯಮಗಳನ್ನು ಪಾಲಿಸಬೇಕು ಎಂದರು.ಸಂಗೀತ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಮಾತನಾಡಿ, ಸಂಗೀತ ವಿಭಾಗವು ಗಾಯನದೊಂದಿಗೆ ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ. ಜ್ಞಾನದ ಜತೆಗೆ ವಿದ್ಯಾರ್ಥಿಗಳ ಉಪಜೀವನಕ್ಕೆ ಬೇಕಾದ ಹಲವು ಸಾಧ್ಯತೆಗಳನ್ನು ಕಲ್ಪಿಸಲು ಕುಲಪತಿ ಅವರು ಪ್ರಯತ್ನಿಸುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ನೃತ್ಯ ಅಧ್ಯಯನಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ ಎಂದರು. ಅಧ್ಯಾಪಕ ಡಾ. ತಿಮ್ಮಣ್ಣ ಭೀಮರಾಯ, ಕಲಾವಿದ ಯಲ್ಲಪ್ಪ ಭಂಡಾರಿ, ವಿದ್ಯಾರ್ಥಿಗಳಾದ ಮಾತಾಜಿ, ಕವನ, ಹರೀಶ ಭಂಡಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net