ಬಡವರಿಗೆ ಆರನೇ ಗ್ಯಾರಂಟಿ ನೀಡಲು ಚಿಂತನೆ

01 MANJU 05
Published on

ಹೊಸಪೇಟೆ : ನಾಡಿನಲ್ಲಿ ಆಚರಿಸುವ ಯುಗಾದಿ, ದೀಪಾವಳಿ, ಕ್ರಿಸ್ಮಸ್ ಸೇರಿದಂತೆ ಈ ಎಲ್ಲಾ ಹಬ್ಬಗಳಿಗಿಂತ ರಾಜ್ಯೋತ್ಸವ ಹಬ್ಬವೇ ವಿಶೇಷ. ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು ಎಲ್ಲಾ ಸಮಾಜದವರು ಭಾವೈಕ್ಯದಿಂದ ರಾಜ್ಯವನ್ನು ಮುನ್ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಹೇಳಿದರು.

ನಗರದ ಪುನೀತ್ ರಾಜಕುಮಾರ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೋಂಡ ಕನ್ನಡ ರಾಜ್ಯೋತ್ಸವ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಹಾಗೂ ಪಥಸಂಚಲನದಲ್ಲಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಚುನಾವಣೆ ವೇಳೆಯಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅದರಂತೆ ಐದೂ ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಿ ಅನುಷ್ಟಾನ ಮಾಡಲಾಗಿದೆ. ಆರನೇ ಗ್ಯಾರಂಟಿಯಾಗಿ ಬಡ ಜನರ, ವಸತಿ ರಹಿತರ ಕಾಳಜಿಗೆ ವಿಶೇಷವಾಗಿ ಮನೆಗಳನ್ನು ನೀಡುವ ಚಿಂತನೆ ಮಾಡಲಾಗಿದೆ. ಸ್ಲಂ ಬೋರ್ಡ್ ನಿಂದ 1.80 ಸಾವಿರ ಮನೆಗಳು ಮತ್ತು ರಾಜೀವ ಗಾಂಧಿ ವಸತಿ ನಿಗಮದಿಂದ 47 ಸಾವಿರ ಮನೆಗಳು ಸೇರಿ 2.03 ಲಕ್ಷ ಮನೆಗಳನ್ನು ಈ ಹಿಂದಿನ ನಮ್ಮ ಸರ್ಕಾರದಲ್ಲಿ ಮಂಜೂರು ಮಾಡಲಾಗಿತ್ತು, ಇವುಗಳು ಕಾರಣಾಂತರದಿAದ ಹಂಚಿಕೆಯಾಗಲಿಲ್ಲ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಂಜೂರು ಮಾಡಲಾಗುತ್ತದೆ. ವಸತಿ ರಹಿತರ ಸಮಸ್ಯೆಗಳಿಗೆ ಸ್ಪಂದಿಸಿ ಕಳೆದ ಫೆಬ್ರವರಿಯಲ್ಲಿ 36799 ಮನೆಗಳನ್ನು ನೀಡಿ ಇದಕ್ಕಾಗಿ 500 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಬರುವ ಒಂದು ತಿಂಗಳಲ್ಲಿ ಮತ್ತೆ 38 ಸಾವಿರ ಮನೆಗಳನ್ನು ನೀಡುವ ಮೂಲಕ ವಸತಿ ರಹಿತರಿಗೆ ಸೂರು ಕಲ್ಪಿಸಲಾಗುತ್ತದೆ ಎಂದರು.

ಕನ್ನಡ ರಾಜ್ಯೋತ್ಸವದ ನಿಮಿತ್ತ ಜಿಲ್ಲೆಯಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾಯಕ್ರಮದ ಮುನ್ನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮೊಟ್ಟ ಮೊದಲ ಶಿಲಾಶಾಸನವಾದ ಹಲ್ಮಿಡಿ ಶಾಸನದ ಸ್ಮಾರಕ ಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಲೋಕಾರ್ಪಣೆಗೊಳಿಸಿದರು.

ಶಾಸಕ ಎಚ್.ಆರ್.ಗವಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿ.ಪಂ. ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ ಶಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಡಿವೈಎಸ್ಪಿ ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net