

ಹೊಸಪೇಟೆ: ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಣೆಯಾದ ಬೆನ್ನಲ್ಲೆ ಗದ್ದುಗೆ ಏರಲು ತೀವ್ರ ಪೈಪೋಟಿ ನಡೆದಿತ್ತು. ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ.
ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಪಟ್ಟಣ ಪಂಚಾಯಿತಿ 20 ಸದಸ್ಯರ ಬಲ ಹೊಂದಿದ್ದು ಇದರಲ್ಲಿ 14 ಕಾಂಗ್ರೆಸ್, 5 ಪಕ್ಷೇತರ, ಒಬ್ಬ ಬಿಜೆಪಿ ಸದಸ್ಯರಿದ್ದಾರೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇರುವುದರಿಂದ ಅಧ್ಯಕ್ಷ ಸ್ಥಾನಕ್ಕೇರಲು ಮಹಿಳಾ ಸದಸ್ಯರು ಪಕ್ಷದ ಪ್ರಭಾವಿ ನಾಯಕರ ವಿಶ್ವಾಸ ಗಳಿಸಲು ಇನ್ನಿಲ್ಲದ ಕಸರತ್ತು ನಡೆಸಿದರು. ಮಂಗಳವಾರ ಕಾಂಗ್ರೆಸ್ ಪಕ್ಷದ ಹಿರಿಯ ಸಭೆ ನಡೆದಿದ್ದು, ಅವಿರೋಧ ಆಯ್ಕೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಪಟ್ಟಣದ 17ನೇ ವಾರ್ಡ್‌ನ ಸದಸ್ಯೆ ಅಮೀನಾ ಹಾಗೂ 5ನೇ ವಾರ್ಡ್ ಸದಸ್ಯೆ ಕೆ.ವಿ.ಸರಿತಾ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. 17ನೇ ವಾರ್ಡ್‌ನ ಸದಸ್ಯೆ ಅಮೀನಾ ಅಧ್ಯಕ್ಷೆ, 4ನೇ ವಾರ್ಡ್‌ನ ಸದಸ್ಯ ಎಚ್.ಗೋಪಾಲಕೃಷ್ಣ ಉಪಾಧ್ಯಕ್ಷ ಸ್ಥಾನಕ್ಕೆ ಹಾಗೂ 12ನೇ ವಾರ್ಡ್‌ನ ಸದಸ್ಯ ಅಜಯ್ ಕುಮಾರ್ ಸ್ಥಾಯಿ ಸಮಿತಿ ಅಧ್ಯಕ್ಷರಾಗುವಂತೆ ಪಕ್ಷದ ಸಭೆಯಲ್ಲಿ ತಿರ್ಮಾನ ಆಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ 10 ವರ್ಷದಲ್ಲಿ ಮುಸ್ಲಿಮ್ ಸಮುದಾಯದಿಂದ ಆಡಳಿತ ಚುಕ್ಕಾಣಿ ಹಿಡಿದ್ದಿದ್ದಾರೆ. ಆದ್ದರಿಂದ ಈ ಭಾರಿ ಅವಧಿಗೆ ಸಾಮಾನ್ಯ ಮಹಿಳೆಗೆ ಮೀಸಲಾತಿ ಇರುವುದರಿಂದ ಆಕಾಂಕ್ಷಿಗಳು ಜಾತಿ ಲೆಕ್ಕಾಚಾರದಲ್ಲಿದ್ದಾರೆ. ಎಸ್ಸಿ ಸಮುದಾಯಕ್ಕೆ ಮೀಸಲಾಯಿತಿ ಅನ್ಯಾಯ ಆಗಿದೆ. ಆದ್ದರಿಂದ ಸಾಮಾನ್ಯ ಮೀಸಲಾಯಿತಿಯಲ್ಲಿ ಎಸ್ಸಿ ಸಮುದಾಯಕ್ಕೆ ನೀಡಬೇಕು ಎಂದು ಕೆ.ವಿ.ಸರಿತಾ ಆಗ್ರಹಿಸಿದರು. ಇನ್ನೂ ಪಟ್ಟಣದಲ್ಲಿ 6 ಎಸ್ಸಿ, 6 ಎಸ್ಟಿ ಸಮುದಾಯದ ಸದಸ್ಯರಿದ್ದರೆ, 5 ಜನ ಮುಸ್ಲಿಮ್ ಸಮುದಾಯ ಹಾಗೂ 3 ಜನ ಇತರೆ ಜನಾಂಗದ ಸದಸ್ಯರು ಇದ್ದಾರೆ. ಮಂಗಳವಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನೇತೃತ್ವದಲ್ಲಿ ಸಭೆ ನಡೆದಿದೆ. ಆದರೆ, ರಾತ್ರಿ ವೇಳೆಗೆ ಏನಾಗುತ್ತದೆ ಎಂಬುದು ಕಾದು ನೋಡಬೇಕಿದೆ.
ಕಮಲಾಪುರ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಸೆ.04ರಂದು ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿದೆ. ಬುಧವಾರ ಬೆಳಿಗ್ಗೆ 10 ರಿಂದ ಮದ್ಯಾಹ್ನ 12 ಗಂಟೆಯ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಮಧ್ಯಾಹ್ನ 12.15ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮಧ್ಯಾಹ್ನ 12.30ರವರೆಗೆ ಅವಕಾಶವಿರುತ್ತದೆ. ಅವಶ್ಯವಿದ್ದಲ್ಲಿ ಅದೇ ದಿನ ಮಧ್ಯಾಹ್ನ 1 ಗಂಟೆಯ ನಂತರ ಚುನಾವಣೆಯನ್ನು ನಡೆಸಲಾಗುವುದು. ಹೆಚ್ಚು ಮತಗಳನ್ನು ಪಡೆದು ಜಯಗಳಿಸಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹೆಸರಗಳನ್ನು ಘೋಷಿಸಲಾಗುವುದು ಎಂದು ತಹಸೀಲ್ದಾರ್ ಶೃತಿ ಎಂ.ಮಳ್ಳನಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಬಹುಮತ ಇದೆ. ಜಿಲ್ಲಾಧ್ಯಾಕ್ಷ ನೇತೃತ್ವದಲ್ಲಿ ಸಭೆ ನಡೆಸಿ ಅವಿರೋಧ ಆಯ್ಕೆಗೆ ಸೂಚನೆ ನೀಡಲಾಗಿದೆ. ಪಕ್ಷದ ತಿರ್ಮಾನ ಅಂತಿಮ.ಸಯ್ಯದ್ ಮುಕ್ತಿಯಾರ್ ಪಾಷಾ, ಪ.ಪಂ. ಸದಸ್ಯ, ಕಮಲಾಪುರ