

ಹೊಸಪೇಟೆ: ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸುವಂತೆ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಮಹನೀಯರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಶಿವಯೋಗಿ ಸಿದ್ದರಾಮ ಜಯಂತಿ ಜ.14 ರಂದು, ಜ.19 ರಂದು ಮಹಾಯೋಗಿ ವೇಮನ ಜಯಂತಿ, ಜ.21 ರಂದು ಶಿವಶರಣ ಅಂಬಿಗರ ಚೌಡಯ್ಯ ಜಯಂತಿ ಸರಳವಾಗಿ ಆಚರಿಸಲು ಸಮುದಾಯದವರ ಸಹಯೋಗದಲ್ಲಿ ಅಧಿಕಾರಿಗಳು ಸೂಕ್ತ ಸಿದ್ದತೆ ಕೈಗೊಳ್ಳಬೇಕು.
ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅವರ ತತ್ವಾದರ್ಶಗಳನ್ನು ಪಾಲಿಸುವಂತೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಸ್ಮರಿಸುವ ಕಾರ್ಯ ನಡೆಯಬೇಕಿದೆ. ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ. ಹಿಂದಿನ ಬಾರಿ ಆಚರಣೆಗಳ ವೆಚ್ಚಗಳನ್ನು ಪಾವತಿಸಲು ವಿಳಂಬವಾಗಿರುವುದನ್ನು ಪರಿಶೀಲಿಸಿ ಶೀಘ್ರ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದರು.
ಮಹನೀಯರ ಭಾವಚಿತ್ರಗಳನ್ನು ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಅಳವಡಿಸಲು ಸುತ್ತೋಲೆ ಹೊರಡಿಸಲಾಗುವುದು. ಸಮುದಾಯದವರು ಮಹನೀಯರ ನಿಗದಿತ ಭಾವಚಿತ್ರವನ್ನು ಕಾಣಿಕೆ ನೀಡುವುದಾದರೇ ಎಲ್ಲಾ ಇಲಾಖೆಗಳಿಗೆ ವಿತರಿಸಲು ಸೂಚಿಸಲಾಗುವುದು ಎಂದರು.