

ಹೊಸಪೇಟೆಯಲ್ಲಿ ಉದ್ಯೋಗ ಮೇಳ
ಹೊಸಪೇಟೆ: ಪ್ರಸ್ತುತ ಪದವಿಗೆ ತಕ್ಕ ಹುದ್ದೆ ಲಭಿಸದಿದ್ದರೂ ಕೌಶಲವುಳ್ಳವರಿಗೆ ಉದ್ಯೋಗ ಬಾಗಿಲು ಸದಾ ತೆರೆದಿರುತ್ತದೆ ಎಂದು ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಹೇಳಿದರು.
ನಗರದ ಶ್ರೀ ಶಂಕರ್ ಆನಂದಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಬಳ್ಳಾರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಎನ್.ಸಿ.ಎಸ್.ಅಡಿ ಬುಧವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದರು. ಕೋವಿಡ್ ಸಂದರ್ಭ ಅನೇಕರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವಕಾಶಗಳು ಅನೇಕ ಇದ್ದರೂ ಮಾಹಿತಿ ಹಾಗೂ ಕೌಶಲದ ಕೊರತೆಯಿಂದ ಉದ್ಯೋಗ ಪಡೆದುಕೊಳ್ಳುವಲ್ಲಿ ಅನೇಕರು ವಿಫಲರಾಗುತ್ತಿದ್ದಾರೆ. ಸರ್ಕಾರಿ ಹುದ್ದೆಗಾಗಿ ಕಾಯದೇ ಖಾಸಗಿಯಲ್ಲೂ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಪ್ರತಿಭೆ ಪ್ರದರ್ಶಿಸಿದರೆ ಉತ್ತಮ ಸ್ಥಾನಮಾನಗಳು ಲಭಿಸುತ್ತವೆ ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಡಾ.ಬಿ.ಜಿ. ಕನಕೇಶಮೂರ್ತಿ ಮಾತನಾಡಿ, ಓದಿದವರಿಗೆಲ್ಲ ಸರ್ಕಾರಿ ನೌಕರಿ ದೊರೆಯುವುದು ಕಷ್ಟಸಾಧ್ಯ. ವಿದ್ಯಾರ್ಥಿಗಳು ಸಮಯಪ್ರಜ್ಞೆ, ಬದ್ಧತೆ, ನಿರಂತರ ಪರಿಶ್ರಮ, ನಿಷ್ಠೆ ಮೈಗೂಡಿಸಿಕೊಳ್ಳಬೇಕು. ಹುದ್ದೆ ಸಿಗಲಿಲ್ಲವೆಂದು ಹತಾಶರಾಗದೆ ಮರಳಿಯತ್ನಿಸಬೇಕು ಎಂದರು.
ಯುವ ಮುಖಂಡ ಸಂದೀಪ್‌ಸಿಂಗ್ ಮಾತನಾಡಿ, ಬೃಹತ್ ಉದ್ಯಮಗಳೆಲ್ಲವೂ ಸಣ್ಣ ಉದ್ಯಮದಿಂದಲೇ ಆರಂಭವಾಗಿವೆ ಎಂಬುದುನ್ನು ಮರೆಯಬಾರದು. ಸಣ್ಣ ಕೆಲಸ ಪ್ರಾಮಾಣಿಕತೆಯಿಂದ ಮಾಡಿದರೆ ಹೆಮ್ಮರವಾಗಲಿದೆ ಎಂದರು.
ಉಪನ್ಯಾಸಕ ಪಲ್ಲವ ವೆಂಕಟೇಶ, ನಗರಸಭೆ ಅಧಿಕಾರಿ ರವಿಕುಮಾರ್ ಇತರರಿದ್ದರು. ಕಾಲೇಜಿನ ಟಿ.ವಿ. ವಾರುಣಿ ಕಾರ್ಯಕ್ರಮ ನಿರೂಪಿಸಿದರು