ಹೊಸಪೇಟೆ: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ಸಿದ್ದತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಂರವರ ಜಯಂತಿಯ ಪೂರ್ವಭಾವಿ ಸಭೆ ಹಾಗೂ ಎಸ್ಸಿ ಎಸ್ಟಿ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಕಳೆದೆರಡು ವರ್ಷಗಳಿಂದ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ. ಈ ಬಾರಿ ಜಿಲ್ಲಾಡಳಿತದಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಅದ್ದೂರಿ ಆಚರಣೆಗೆ ಸಿದ್ದವಿದೆ. ಏ.5 ರಂದು ನಗರದ ಡಾ.ಬಾಬು ಜಗಜೀವನರಾಂ ವೃತ್ತದಲ್ಲಿ ಸಾಂಕೇತಿಕವಾಗಿ ಆಚರಣೆ ಮಾಡಿ. ಏ.14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಜಯಂತಿ ಜತೆಗೆ ಬಾಬೂಜೀ ಅವರ ಜಯಂತಿಯನ್ನು ಆಚರಿಸೋಣ. ಇಬ್ಬರು ಮಹನೀಯರ ಭಾವಚಿತ್ರಗಳನ್ನು ನಗರದ ಜಂಬುನಾಥ ದೇಗುಲ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕಾಲೇಜು ರಸ್ತೆಯ ಅಂಬೇಡ್ಕರ್ ವೃತ್ತದ ವರೆಗೆ ವಿವಿಧ ವಾದ್ಯ, ಕಲಾ ತಂಡಗಳೊAದಿಗೆ ಭವ್ಯ ಮೆರವಣ ಗೆಯನ್ನು ನಡೆಸಲಾಗುವುದು.
ನಗರದ ಬಳ್ಳಾರಿ ರಸ್ತೆಯಲ್ಲಿರುವ ದಲಿತರ ರುದ್ರಭೂಮಿ ಅಭಿವೃದ್ಧಿ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಈಗಾಗಲೇ ಶೇ.30 ರಷ್ಟು ಭೂಮಿ ಒತ್ತುವರಿಯಾಗಿದೆ. ತೆರವಿಗೆ ಜಿಲ್ಲಾಡಳಿತ ಕ್ರಮವಹಿಸಬೇಕು. ಅಭಿವೃದ್ಧಿ ಕೊರತೆಯಿಂದ ರುದ್ರಭೂಮಿ ಜಾಗದಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಬಯಲು ಶೌಚ ಪ್ರದೇಶವಾಗಿದೆ. ಶೀಘ್ರವೇ ಗಮನಹರಿಸುವಂತೆ ಮುಖಂಡರೊಬ್ಬರು ತಿಳಿಸಿದರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಕೇವಲ 15 ದಿನಗಳಲ್ಲಿ ರುದ್ರಭೂಮಿ ಜಾಗವನ್ನು ಪರಿಶೀಲಿಸಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆ ಕಚೇರಿ ಸ್ಥಳಾಂತರಕ್ಕೆ ಪರಿಶೀಲನೆ ನಡೆಸಲಾಗುವುದು. ಈಗಾಗಲೇ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಭೂಮಿ ಖರೀದಿಸಲಾಗಿದೆ. ಶೀಘ್ರವೇ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.