

ಹೊಸಪೇಟೆ: ನಗರದ ಜಿಲ್ಲಾಪಂಚಾಯಿತಿ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಕ್ಕ ಕೆಫೆ ಹಾಗೂ ಹಂಪಿಯ ಸಂಚಾರಿ ಅಕ್ಕಕೆಫೆಯನ್ನು ಗುರುವಾರ ಜಿಲ್ಲಾಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಉದ್ಘಾಟಿಸಿದರು.
ನಂತರ ಮಾತನಾಡಿ, ಅಕ್ಕ ಕೆಫೆ ಸ್ಥಾಪನೆ ಮುಖ್ಯ ಉದ್ದೇಶ ಸಂಜೀವಿನಿ ಯೋಜನೆಯಡಿ ನೋಂದಣಿಯಾದ ಮಹಿಳಾ ಸ್ವಸಾಯ ಗುಂಪುಗಳಿಗೆ ಆಹಾರ ಪೂರೈಕೆ ಕ್ಷೇತ್ರದಲ್ಲಿ ಸುಸ್ಥಿರ ಜೀವನೋಪಾಯ ಚಟುವಟಿಕೆಗಳನ್ನು ಒದಗಿಸುವುದಾಗಿದೆ. ಗುಣಮಟ್ಟದ ಶುಚಿ ರುಚಿಯಾದ ಪೌಷ್ಟಿಕ ಆಹಾರವನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಒದಗಿಸಲಾಗುತ್ತದೆ ಎಂದರು.
ಅಕ್ಕ ಕೆಫೆ ನಿರ್ವಹಣಾ ಜವಾಬ್ದಾರಿಯನ್ನು ಸಂಜೀವಿನಿ ಒಕ್ಕೂಟದ ಮೂಲಕ ಆಯ್ಕೆ ಮಾಡಲಾದ ನಾಗೆನಹಳ್ಳಿ ಗ್ರಾಮ ಗ್ರಾಮಚಾಯಿತಿಯ ಹೊಸುರಮ್ಮ ದೇವಿ ಸ್ವಸಹಾಯ ಗುಂಪಿಗೆ ವಹಿಸಲಾಗಿದೆ. ಹಂಪಿಯ ವೈಷ್ಣವ ದೇವಿ ಸ್ವಾಸಹಾಯ ಗುಂಪಿಗೆ ಕೆಫೆಯನ್ನು ಈ ಗುಂಪಿಗೆ ಸೂಕ್ತ ತರಬೇತಿಯನ್ನು ಸಂಜೀವಿನಿ ಯೋಜನೆಯಿಂದ ನೀಡಲಾಗಿರುತ್ತದೆ ಎಂದರು.
ಶಾಸಕರಾದ ಎಚ್.ಆರ್.ಗವಿಯಪ್ಪ, ನೇಮಿರಾಜ್ ನಾಯ್ಕ, ಕೃಷ್ಣನಾಯ್ಕ, ಲತಾ ಮಲ್ಲಿಕಾರ್ಜುನ, ವಕ್ಫ್ ಬೋರ್ಡ್ ಜಿಲ್ಲಾ ಅಧ್ಯಕ್ಷ ದಾದಾಪೀರ್ ಇತರರಿದ್ದರು.