

ಹೊಸಪೇಟೆ: ಒಳ ಮೀಸಲಾತಿ ನಿರ್ಧಾರಕ್ಕೆ ಆಲ್‌ಇಂಡಿಯಾ ಬಂಜಾರ್ ಸೇವಾ ಸಂಘ ಹಾಗೂ ಬಂಜಾರ್ ಸಮುದಾಯದ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದ್ದು, ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದವು.
ಡಾ.ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಜಮಾಯಿಸಿದ ಸಮುದಾಯದ ಮುಖಂಡರು, ಬಿಜೆಪಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ತಹಸೀಲ್ದಾರ್ ವಿಶ್ವಜೀತ್ ಮೆಹತಾಗೆ ಮನವಿ ಸಲ್ಲಿಸಿದರು. ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ಸಾಕಷ್ಟು ಲೋಪ ದೋಷಗಳಿವೆ. ಈ ವರದಿಯನ್ನು ಒಪ್ಪಿರುವುದಿಲ್ಲ ಎನ್ನುತ್ತಲೇ ಇದರ ಆಧಾರದ ಮೇಲೆ ಪರಿಶಿಷ್ಟ ಜಾತಿಗಳನ್ನು 4 ಗುಂಪುಗಳಾಗಿ ವಿಭಜಿಸಿ, ಒಳ ಮೀಸಲಾತಿ ಹಂಚಿಕೆ ಮಾಡಿರುವುದು ನ್ಯಾಯ ಸಮ್ಮತವಲ್ಲ. ನಾಡಿನ ಬಂಜಾರ, ಭೋವಿ, ಕೊರಮ, ಕೊರಚ, ಛಲವಾದಿ ಮತ್ತಿತರ ಸಮುದಾಯಗಳನ್ನು ವಂಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದಲ್ಲಿ ಅವಕಾಶವಿಲ್ಲದ ಹಾಗೂ ಸುಪ್ರೀಂಕೋರ್ಟ್‌ನ ತೀರ್ಪಿಗೆ ವಿರುದ್ಧವಾದ ಒಳಮೀಸಲಾತಿ ಹಂಚಿಕೆ ಕೇಂದ್ರಕ್ಕೆ ಶಿಫಾರಸು ಮಾಡುತ್ತಿರುವುದನ್ನು ತಕ್ಷಣ ತಡೆಹಿಡಿಯಬೇಕು. ಮೀಸಲಾತಿ ಹಂಚಿಕೆ ಮಾಡಿರುವುದು ಅಸಂವಿಧಾನಿಕ, ಅವಾಸ್ತವಿಕ ಅಂಶಗಳ ಮುಖಾಂತರ ಪರಿಶಿಷ್ಟ ಸಹೋದರ ಸಮುದಾಯಗಳ ನಡುವಿನ ಐಕ್ಯತೆಯನ್ನು ಛಿದ್ರಗೊಳಿಸುವ ಈ ಉಪ ಸಮಿತಿಯ ವರದಿಯನ್ನು ತಿರಸ್ಕರಿಸಬೇಕು.
ಸಂವಿಧಾನದ ಪ್ರಕಾರ ಪರಿಶಿಷ್ಟ ಜಾತಿಗಳ ಪಟ್ಟಿ ಸೇರ್ಪಡೆ ಅಥವಾ ಡಿಲಿಟ್ ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿ ಬರುವುದರಿಂದ ರಾಜ್ಯ ಸರ್ಕಾರವು ಅನಗತ್ಯ ಹಸ್ತಕ್ಷೇಪ ಮಾಡದಿರುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಶಿವರಾಮ ನಾಯ್ಕ, ಹನುಮ ನಾಯ್ಕ, ಹೇಮಗಿರಿ ನಾಯ್ಕ, ಮಣಿಕಂಠ, ಸೋಮುನಾಯ್ಕ, ಡಿ.ಕೃಷ್ಣ ನಾಯ್ಕ, ಶಿಲ್ಪ ಬಾಯಿ, ಶಕುಂತಲಾ ಬಾಯಿ, ವಿ.ಕೃಷ್ಣ ನಾಯ್ಕ ಮತ್ತಿತರರಿದ್ದರು.