ಹೊಸಪೇಟೆ ಸೋಂಕಿತರ ಪ್ರದೇಶದ ಸುತ್ತಲಿನ ಖಾಸಗಿ ಕ್ಲಿನಿಕ್‌ಗಳ ಮೇಲೆ ಎಸಿ ದಾಳಿ, ಐದು ವೈದ್ಯರ ವಿರುದ್ಧ ಪ್ರಕರಣ ದಾಖಲು

150420 Hosapete Ac Rides on Fake Dectors
Published on

ಹೊಸಪೇಟೆ: ಐದು ಸೋಂಕಿತರು ಪತ್ತೆಯಾದ ಎಸ್‌ಆರ್ ನಗರದ ಸುತ್ತಲಿನಲ್ಲಿ ಪರವಾನಗಿ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಐದು ಖಾಸಗಿ ಕ್ಲಿನಿಕ್‌ಗಳ ಮೇಲೆ ಎಸಿ ಶೇಕ್ ತನ್ವೀರ್ ಆಸಿಫ್ ನೇತೃತ್ವದ ತಂಡ ಮಂಗಳವಾರ ದಾಳಿ ನಡೆಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎಸ್‌ಆರ್ ನಗರದಲ್ಲಿ ಡಾ.ಶಬ್ಬೀರ್ ಬಾಷಾ ಅವರ ಹೆಲ್ತ್‌ಕೇರ್ ಕ್ಲಿನಿಕ್, ಡಾ.ಶಂಕರನಾಯ್ಕರ ಪವನ್ ಕ್ಲಿನಿಕ್, ಡಾ.ಮಲ್ಲಿಕಾರ್ಜುನ ರೆಡ್ಡಿ ಬಿಇಎಂಎಸ್ ರೆಡ್ಡಿ ಕ್ಲಿನಿಕ್, ಡಾ.ಮುನಿಸ್ವಾಮಿರೆಡ್ಡಿ ಬಿಇಎಂಎಸ್ ಹರ್ಷಾ ಕ್ಲಿನಿಕ್ ಹಾಗೂ ಬಳ್ಳಾರಿ ರೋಡ್ ಸರ್ಕಲ್‌ನಲ್ಲಿರುವ ಡಾ.ಟಿ.ಕೆ.ರಾಯ್ ಬಿಎಎಸ್‌ಎಂ ಚಾಂದ್ಸಿ ಕ್ಲಿನಿಕ್ ಮೇಲೆ ದಾಳಿ ನಡೆಸಲಾಗಿದೆ. ಅಧಿಕೃತ ಪರವಾನಗಿ ಪಡೆಯದೆ ಕ್ಲಿನಿಕ್ ನಡೆಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ವೈದ್ಯರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಲಾಗಿದೆ. ತರಬೇತಿ ಪಡೆದ ನರ್ಸ್‌ಗಳು ಇಲ್ಲ. ಕ್ಲಿನಿಕ್‌ನಲ್ಲಿ ಸ್ವಚ್ಛತೆ ಕಾಪಾಡದೆ ರೋಗಿಗಳಿಗೆ ಗ್ಲುಕೋಸ್, ಚುಚ್ಚುಮದ್ದು ಕೊಡಲಾಗುತ್ತಿತ್ತು ಎಂದು ತಹಸೀಲ್ದಾರ್ ಎಚ್.ವಿಶ್ವನಾಥ ತಿಳಿಸಿದರು.

ತಾಲೂಕಿನಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದಲ್ಲಿ ಕೂಡಲೇ ಸ್ಥಗಿತಗೊಳಿಸಬೇಕು. ದೂರುಗಳು ಬಂದ ತಕ್ಷಣವೇ ದಾಳಿ ನಡೆಸಲಾಗುವುದು ಎಂದು ಟಿಎಚ್‌ಒ ಡಾ.ಡಿ.ಭಾಸ್ಕರರಾವ್ ಎಚ್ಚರಿಕೆ ನೀಡಿದ್ದಾರೆ.ನಗರ ಠಾಣೆ ಸಿಪಿಐ ಪ್ರಸಾದ್ ಗೋಕುಲೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net