ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ

15 MANJU 04
Published on

ಹೊಸಪೇಟೆ: ಅಧಿಕಾರಿಗಳು ಸಾಮಾಜಿಕ ಕಾಳಜಿ ಹೊಂದಿ ಕಾರ್ಯನಿರ್ವಹಿಸಬೇಕು. ಆಯಾ ಇಲಾಖೆಗಳ ಯೋಜನೆಗಳ ಅನುಷ್ಠಾನಕ್ಕಾಗಿ ಬದ್ದತೆಯಿಂದ ಕಾರ್ಯನಿರ್ವಹಿಸಬೇಕು ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

ಪಡಿತರ ವಿತರಣಾ ವ್ಯವಸ್ಥೆಯ ಬಗ್ಗೆ ಕೇಳಿ, ಪಡಿತರ ಆಹಾರ ಧಾನ್ಯಗಳು ಕಾಳಸಂತೆಯಲ್ಲಿ ಮಾರಾಟವಾಗದಂತೆ ನಿಗಾ ವಹಿಸಬೇಕು. ತಾಂತ್ರಿಕ ತೊಂದರೆ ಸರಿಪಡಿಸಿ ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತಿನ ಹಣವು ಫಲಾನುಭವಿಗಳಿಗೆ ಬೇಗನೆ ತಲುಪುವ ಹಾಗೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಈಗಾಗಲೇ ಜೂನ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಸಹಾಯಧನವು ಪಾವತಿಯಾಗಿರುತ್ತದೆ. ಬಾಕಿ ಹಣವನ್ನು ಸಂಬAಧಿಸಿದ ಫಲಾನುಭವಿಗಳಿಗೆ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳು ದೊರೆಯುವಂತೆ ನೋಡಿಕೊಳ್ಳಬೇಕು. ಅಂಗನವಾಡಿ, ಶಾಲಾ, ಕಾಲೇಜು, ಆಸ್ಪತ್ರೆ ಹಾಗೂ ಇತರೆ ನಿರ್ಮಾಣ ಕಾರ್ಯಗಳಿಗೆ ನಿವೇಶನ ಬೇಡಿಕೆ ಮತ್ತು ಮಂಜೂರಾತಿ ಕಾರ್ಯಕ್ಕೆ ಹೆಚ್ಚಿನ ಗಮನ ಕೊಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net