

ಹೊಸಪೇಟೆ: ಮಹಿಳೆಯರು ಸಹ ಸಾಮಾಜಿಕವಾಗಿ ಸಮಾನತೆ ಸಾಧಿಸಲು ಮತ್ತು ಅವರು ಶಿಕ್ಷಣ, ಉದ್ಯೋಗ ಪಡೆದು ಸ್ವಾವಲಂಬನೆ ಜೀವನ ನಡೆಸಲು ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮಾನ ಎ.ನಂದಗಡಿ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಮಂಗಳವಾರ ನಡೆದ ವಿಶ್ವ ಮಾನವ ಕಳ್ಳ ಸಾಗಾಣೆ ವಿರೋಧಿ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮಾನವ ಕಳ್ಳ ಸಾಗಾಣೆಯು ಸಹ ಒಂದಾಗಿದೆ. ಇಂತಹ ಕೃತ್ಯಕ್ಕೆ ಹೆಚ್ಚಾಗಿ ಮಹಿಳೆಯರು, ಬಾಲಕಿಯರು ಬಲಿಪಶುವಾಗುತ್ತಾರೆ. ಈ ಕಳ್ಳ ಸಾಗಣೆಗೆ ಪುಟ್ಟ ಮಕ್ಕಳು ಕೂಡ ಬಲಿಯಾಗುತ್ತಿದ್ದಾರೆ. ಭಾರತದಲ್ಲಿ ಮಾನವ ಕಳ್ಳ ಸಾಗಣೆ ವಿರುದ್ಧ ಜಾಗೃತಿ ಮೂಡಿಸಲು ಕಾನೂನು ಅರಿವು ಕಾರ್ಯಕ್ರಮ, ಜನಜಾಗೃತಿ ಜಾಥಾ, ವಿಚಾರ ಸಂಕಿರಣಗಳು ನಿರಂತರ ನಡೆಯಬೇಕಿದೆ ಎಂದರು. ಪ್ರಾAಶುಪಾಲ ಎಸ್.ಕೆ.ಅನ್ಸರ್ ಬಾಶು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಹಾಗೂ ಮಾನವ ಕಳ್ಳ ಸಾಗಣೆಯನ್ನು ಸಂಪೂರ್ಣವಾಗಿ ತಡೆಯಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.