

ಹೊಸಪೇಟೆ: ವಿಜಯನಗರ ಹಾಗೂ ಬಳ್ಳಾರಿ ಅವಳಿ ಜಿಲ್ಲೆಗಳ ವಿವಿಧ ರೈಲ್ವೆ ಬೇಡಿಕೆಗಳನ್ನು ಈಡೇರಿಕೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ನೈರುತ್ಯ ರೈಲ್ವೇ ವಲಯ ರೈಲ್ವೆ ಬಳಕೆದಾರರ ಹಿರಿಯ ಸಲಹಾ ಸಮಿತಿ ಸದಸ್ಯ ಬಾಬುಲಾಲ್ ಜೈನ್ ಒತ್ತಾಯಿಸಿದರು.
ಹುಬ್ಬಳ್ಳಿ ರೈಲ್ವೆ ಸೌಧದಲ್ಲಿ ನೈರುತ್ಯ ರೈಲ್ವೇ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ನೈರುತ್ಯ ರೈಲ್ವೇ ವಲಯ ಬಳಕೆದಾರರ ಸಮಾಲೋಚನಾ ಸಮಿತಿ ಸಭೆಯಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಹಲವು ಪ್ರಮುಖ ರೈಲ್ವೆ ಬೇಡಿಕೆಗಳ ಬಗ್ಗೆ ಶೀಘ್ರ ಈಡೇರಿಸಬೇಕು ಎಂದು ಆಗ್ರಹಿಸಿದರು.
ಗಾಡಿ ಸಂಖ್ಯೆ (07335/07336) ಬೆಳಗಾವಿ-ಹೈದ್ರಾಬಾದ್-ಮಣಗೂರು ರೈಲನ್ನು ಪುನರ್ ಆರಂಭಗೊಳಿಸಿ, ದಿನವಹಿ ರೈಲಾಗಿ ಖಾಯಂ ಗೊಳಿಸಬೇಕು. ಹೊಸಪೇಟೆ-ಮುಂಬೈ ನಡುವೆ ಸಂಚರಿಸುತ್ತಿರುವ ಗಾಡಿ ಸಂಖ್ಯೆ (11139/11140) ಈ ರೈಲಿಗೆ ಹಳೆಯ ಐಸಿಎಫ್ ಕೋಚ್‌ಗಳನ್ನು ಅಳವಡಿಸಲಾಗಿದ್ದು, ಸದರಿ ರೈಲಿಗೆ ಆಧುನಿಕ ಸೌಲಭ್ಯವುಳ್ಳ ಪೂರ್ಣಪ್ರಮಾಣದ ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಂದ ಮುಂಬೈ ಮತ್ತು ಮಹರಾಷ್ಟçದ ಇತರ ಭಾಗಗಳಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚುವರಿ ಆಸನಗಳ ಕೋಟಾವನ್ನು ನಿಗದಿಪಡಿಸಬೇಕು. ನಗರದ ಚಿತ್ತವಾಡ್ಗಿ ಪ್ರದೇಶದಲ್ಲಿ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ: 4ರಲ್ಲಿ (ಐ.ಎಸ್.ಆರ್.ಸಕ್ಕರೆ ಕಾರ್ಖಾನೆ ಸಮೀಪ) ರೈಲು ಸಂಚಾರ ದಟ್ಟಣೆಯಿಂದ ಹೆಚ್ಚುಕಾಲ ಮುಚ್ಚಿರುವುದರಿಂದ ಈ ಪ್ರದೇಶದ ನಿವಾಸಿಗಳಿಗೆ ವಿಪರೀತ ತೊಂದರೆಯಾಗುತ್ತದೆ. ಇಲ್ಲಿ ಸುರಕ್ಷತೆ ಮತ್ತು ತಡೆ ರಹಿತ ಸುಗಮ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಆರ್‌ಓಬಿ (ಮೇಲು ಸೇತುವೆ) ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಹಬ್ಬಗಳು ಹಾಗೂ ಇತರೆ ವಿಶೇಷ ಸಂದರ್ಭದಲ್ಲಿ ಮೈಸೂರು ಮತ್ತು ಬೆಂಗಳೂರಿನಿಂದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ವಿಶೇಷ ರೈಲುಗಳ ಸಂಚಾರ ವ್ಯವಸ್ಥೆಯನ್ನು ಮಾಡಬೇಕು.
ಹಂಪಿ ಎಕ್ಸ್ಪ್ರೆಸ್ ಹಾಗೂ ಹೊಸಪೇಟೆ-ಮುಂಬೈ ಗಾಡಿಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಮರ್ಪಕ ಹೊದಿಕೆ (ಬೆಡ್‌ರೋಲ್) ಮತ್ತಿತರ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.