

ಹೊಸಪೇಟೆ: ಬಡವರಿಗೆ ಮನೆ, ನಿವೇಶನ ಮಂಜೂರು ಮಾಡಬೇಕು ಮತ್ತು ರೈತರಿಗೆ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಶಾಸಕ ಎಚ್.ಆರ್. ಗವಿಯಪ್ಪನವರ ಮನೆ ಎದುರು ಸಿಪಿಐಎಂ ಪಕ್ಷದ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಶಾಸಕರಾಗಿ ಎರಡು ವರ್ಷಗಳು ಕಳೆದರೂ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಹಾಗೂ ಜಿಲ್ಲಾಧಿಕಾರಿ ಅವರಿಗೂ ಮನವಿ ಸಲ್ಲಿಸಲಾಗಿದೆ. ಆದರೂ ಜನರ ಸಮಸ್ಯೆ ಹಾಗೇ ಉಳಿದಿವೆ. ಹೊಸಪೇಟೆ ನಗರಸಭೆಗೆ ಮನೆ, ನಿವೇಶನಕ್ಕಾಗಿ ಸಲ್ಲಿಸಲಾಗಿದೆ. ಆದರೂ ಬಡವರಿಗೆ ಮನೆ, ನಿವೇಶನ ಮಂಜೂರು ಮಾಡಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಕ್ಕರೆ ಕಾರ್ಖಾನೆ ಸ್ಥಾಪನೆ ಮತ್ತು ಸ್ವಂತ ಮನೆ, ನಿವೇಶನ ಇಲ್ಲದ ಬಡವರಿಗೆ ಮನೆ, ನಿವೇಶನ ಮಂಜೂರು ಮಾಡಬೇಕು. ಹತ್ತಾರು ಸಲ ಚರ್ಚೆ ಮಾಡಿದರೂ ಇನ್ನೆರಡು ತಿಂಗಳಲ್ಲಿ ಅನುಷ್ಠಾನ ಮಾಡುವುದಾಗಿ ಹೇಳುತ್ತಲೆ ಬಂದಿದ್ದೀರಿ. ಇನ್ನೂ ಪತ್ರಿಕೆಗಳಲ್ಲೂ ಈ ರೀತಿಯ ಭರವಸೆಯ ಮಾತುಗಳನ್ನು ಹೇಳುತ್ತಲೇ ಬಂದಿರುತ್ತೀರಿ. ಚುನಾವಣೆ ಸಂದರ್ಭದಲ್ಲಿ ನೀವು ನೀಡಿದ ಭರವಸೆಗಳನ್ನು ನಂಬಿ ಮತದಾರರು ಮೂವತ್ತು ಸಾವಿರಕ್ಕೂ ಮೇಲ್ಪಟ್ಟು ಅಂತರದಲ್ಲಿ ಗೆಲ್ಲಿಸಿದ್ದಾರೆ. ವಿಜಯನಗರ ಕ್ಷೇತ್ರದ ರೈತರು, ಕಾರ್ಮಿಕರು, ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಹಾಗೂ ಬಡವರಿಗೆ ನೀಡಿದ ಭರವಸೆಯ ಮಾತಿನಂತೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಆರ್. ಭಾಸ್ಕರ್ ರೆಡ್ಡಿ, ಎನ್. ಯಲ್ಲಾಲಿಂಗ, ಬಿಸಾಟಿ ಮಹೇಶ್, ಗೋಪಾಲ್, ವಿ. ಸ್ವಾಮಿ, ಈಡಿಗರ ಮಂಜುನಾಥ, ಸತ್ಯಮೂರ್ತಿ ಇತ್ತಿತರರಿದ್ದರು.