ಕಾನೂನು ಹೋರಾಟಕ್ಕೆ ನಾವು ಸಿದ್ದ

news
ಗೃಹ ಸಚಿವ ಡಾ.ಜಿ. ಪರಮೇಶ್ವರ
Published on

ಹೊಸಪೇಟೆ: ಸಿಎಂ ವಿರುದ್ಧ ಬಿಜೆಪಿ ಮುಡಾ ಹಗರಣ ಸೃಷ್ಡಿಸಿದೆ. ರಾಜಭವನ ದುರ್ಬಳಕೆಯಾಗಿದೆ. ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ನೀಡಿದರೆ ಕಾನೂನು ಹೋರಾಟಕ್ಕೆ ನಾವು ಸಿದ್ದರಿದ್ದೇವೆ ಎಂದು ಗೃಹ ಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಪಾಲರ ಮೇಲೆ ಒತ್ತಡ ಹೇರುತ್ತಿದೆ. ಪ್ರಾಸಿಕ್ಯೂಷನ್ ನೀಡಲು ಈ ಪ್ರಕರಣದಲ್ಲಿ ಮೆಟಿರಿಯಲ್ ಇಲ್ಲ. ಒಂದು ವೇಳೆ ನೀಡಿದರೆ ರಾಜಕಾರಣ ಎಂಬುದು ಸಾಬೀತಾಗಲಿದೆ. ಇದಕ್ಕಾಗಿ ನಾವು ಕಾನೂನು ಹೋರಾಟ ನಡೆಸಲು ಸಿದ್ಧರಾಗಿದ್ದೇವೆ ಎಂದರು.

ಮುಖ್ಯಮAತ್ರಿ ಸಿದ್ದರಾಮಯ್ಯನವರು ಸೈಟು ಕೊಡಿ ಎಂದು ಎಲ್ಲೂ ಆದೇಶ ಮಾಡಿಲ್ಲ. ಅವರ ಸಣ್ಣ ಸಹಿ ಕೂಡ ಇಲ್ಲ. ಅಕ್ರಮವಾಗಿ ನಮ್ಮ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ ಎಂದು ಮುಡಾಕ್ಕೆ ಅವರ ಧರ್ಮಪತ್ನಿ ಕೇಳಿಕೊಂಡಿದ್ದಾರೆ. ಇದಕ್ಕಾಗಿ ಮುಡಾದಿಂದ ಸೈಟು ನೀಡಲಾಗಿದೆ. ಇಷ್ಟೇ ಕೊಡಿ, ನಮಗೆ ಇಂತಹ ಜಾಗದಲ್ಲೇ ಕೊಡಿ ಎಂದು ಅವರು ಕೇಳಿಲ್ಲ. ಮುಡಾದಿಂದ ಕೊಡಲಾಗಿದೆ. ಈಗ ಇದನ್ನೇ ಹಗರಣ ಎಂದು ಸೃಷ್ಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈಗಾಗಲೇ ನಮ್ಮ ಸರ್ಕಾರ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿದೆ. ಈ ಆಯೋಗ ತನಿಖೆ ನಡೆಸುತ್ತಿದೆ. ಈ ಆಯೋಗದಲ್ಲಿ ತಪ್ಪಾಗಿ ಎಂದರೆ ಆಗ ರಾಜ್ಯಪಾಲರು ಕ್ರಮವಹಿಸಲಿ. ಈಗ ಯಾರೋ ಮನವಿ ಕೊಟ್ಟಿದ್ದಾರೆ ಎಂದು ನೋಟಿಸ್ ಕೊಡುವುದು ಸರಿಯಲ್ಲ. ರಾಜ್ಯಪಾಲರ ಮೇಲೆ ಒತ್ತಡ ಹೇರುವುದು ಕೂಡ ಸರಿಯಲ್ಲ. ಬಿಜೆಪಿ-ಜೆಡಿಎಸ್‌ನವರು ಇದನ್ನೇ ನೆಪ ಮಾಡಿಕೊಂಡು ಪಾದಯಾತ್ರೆ ಮಾಡುತ್ತಿರುವುದು ಸರಿಯಲ್ಲ. ನಾವು ಈ ದೇಶದ ಸಂಪತ್ತು ಉಳಿಸಲು ಬೆಂಗಳೂರಿನಿAದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದ್ದೇವು. ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಅರ್ಥವೇ ಇಲ್ಲ ಎಂದರು.

ಶಾಸಕರಾದ ಎಚ್.ಆರ್. ಗವಿಯಪ್ಪ, ಪ್ರಸಾದ್ ಅಬ್ಬಯ್ಯ, ಎಂ.ಪಿ. ಲತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net