

ಹೊಸಪೇಟೆ: ಹಿಂದಿ ದಿವಸ್ ಆಚರಣೆ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಮಾತನಾಡಿ, ದೇಶದಲ್ಲಿ ಹಿಂದಿ ಭಾಷೆ ಹೇರಿಕೆ ಸರಿಯಲ್ಲ. ಸ್ವಾತಂತ್ರ‍್ಯ ಸಂದರ್ಭದಲ್ಲೇ ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ಧ್ವನಿ ಎತ್ತಿದ್ದವು. ಇಂಗ್ಲಿಷ್ ಭಾಷೆ ಕುರಿತು ಹದಿನೈದು ವರ್ಷಗಳ ಬಳಿಕ ಪರಾಮರ್ಶೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಕೇಂದ್ರ ಸರ್ಕಾರಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆಯಾ ರಾಜ್ಯ ಭಾಷೆಗಳಿಗೆ ಮನ್ನಣೆ ದೊರೆಯಬೇಕು. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಧ್ಯಾನ್ಯತೆ ದೊರೆಯಬೇಕು. ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು. ಹಿಂದಿ ಭಾಷೆ ಹೇರಿಕೆ ಮಾಡುವುದನ್ನು ಕೇಂದ್ರ ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ನಗರದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಿಂದ ಡಾ.ಪುನಿತ್ ರಾಜಕುಮಾರ್ ವೃತ್ತದ ವರೆಗೆ ಪಾದಯಾತ್ರೆ ನಡೆಸಿ ಆಗ್ರಹಿಸಿದರು. ಮುಖಂಡರಾದ ಶ್ರೀನಿವಾಸ್, ಎಸ್. ಎಂ. ಜಾಫರ್, ಪ್ರಶಾಂತ್, ರಮೇಶ್, ಜಿ. ನಾಗರಾಜ್, ಕಾರಿಗನೂರು ರಾಮಕೃಷ್ಣ, ಪಾಪಿನಾಯಕನಹಳ್ಳಿ ಸೋಮಣ್ಣ, ಟಿಪ್ಪು ಸುಲ್ತಾನ್, ಇಕ್ಬಾಲ್, ವಿರುಪಾಕ್ಷಿ, ರಾಘು, ಕಣಿವಿ ಕುಮಾರ್ ಇತರರಿದ್ದರು.