

ಹೊಸಪೇಟೆ: ಆರೋಗ್ಯ ಇಲಾಖೆಯ ಆಡಳಿತ ವ್ಯೆದ್ಯರ ನಿರ್ಲಕ್ಷ್ಯ ಅಥವಾ ಆಸ್ಪತ್ರೆಯ ಯಾವುದಾದರು ಸಿಬ್ಬಂದಿಯ ನಿರ್ಲಕ್ಷ್ಯತೆಯಿಂದ ತಾಯಿ, ಮಗು ಮೃತಪಟ್ಟ ದೂರು ಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಎಫ್‌ಐಆರ್ ದಾಖಲಿಸಿ ಸೇವೆಯಿಂದ ಅಮಾನತು ಮಾಡುವುದಾಗಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ತಾಯಿ ಮತ್ತು ಶಿಶು ಮರಣ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಯಿ ಮತ್ತು ಶಿಶು ಮರಣ ತಡೆಗೆ ವಿಶೇಷ ಗಮನ ಹರಿಸಬೇಕು. ತಾಯಿ ಮತ್ತು ಶಿಶು ಮರಣಕ್ಕೆ ವೈದ್ಯರು ಅಥವಾ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎನ್ನುವ ದೂರು ಬಾರದ ಹಾಗೆ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು. ಪ್ರತಿ ದಿನ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಆರೈಕೆಯ ಬಗ್ಗೆ ಗಮನ ಹರಿಸಬೇಕು. ಶುಶ್ರೂಷಣಾ ಸಿಬ್ಬಂದಿ ರೋಗಿಗಳೊಂದಿಗೆ ಆತ್ಮೀಯತೆಯಿಂದ ನಡೆದುಕೊಳ್ಳಬೇಕು. ಚಿಕಿತ್ಸೆ ಕೊಡುವಾಗ ಜವಾಬ್ದಾರಿಯಿಂದ ವರ್ತಿಸಬೇಕು. ಬೇರೊಬ್ಬರನ್ನು ಹೊಣೆಯಾಗಿಸಬಾರದು. ಸಕಾಲದಲ್ಲಿ ಸಿಗಬೇಕಾಗಿದ್ದ ಆರೋಗ್ಯ ಸೇವೆ ಸಿಗದ ಕಾರಣಕ್ಕೆ ತಾಯಿ ಮರಣ, ಶಿಶುಮರಣ ಪ್ರಕರಣಗಳು ದಾಖಲಾಗುತ್ತಿವೆ ಎನ್ನುವ ದೂರುಗಳು ಬಂದಲ್ಲಿ ಯಾವುದೇ ಮುಲಾಜಿಲ್ಲದೇ ತನಿಖೆಗೊಳಪಡಿಸಿ, ಶಿಕ್ಷೆಗೆ ಗುರಿಪಡಿಸಲಾಗುವುದು ಎಂದರು.
ಸರ್ಕಾರಿ ಆಸ್ಪತ್ರೆಗಳಿಗೆ ಬಹುತೇಕ ಕೃಷಿ ಕಾರ್ಮಿಕರು, ಕಡು ಬಡವರೇ ಬರುತ್ತಾರೆ. ವೈದ್ಯರೇ ದೇವರೆಂದು ಭಾವಿಸಿ ಅವರು ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿಯ ಮೇಲೆ ಪ್ರೀತಿ ವಿಶ್ವಾಸ ಇಟ್ಟುಕೊಂಡಿರುತ್ತಾರೆ. ವೈದ್ಯರು ಏನೇ ಹೇಳಿದರು ಅವರು ಅದಕ್ಕೆ ಸಮ್ಮತಿ ಸೂಚಿಸುತ್ತಾರೆ. ನನ್ನ ಮಗಳು ಆರಾಮಿರಬೇಕು. ಹೆರಿಗೆ ಸುಸೂತ್ರವಾಗಿ ನಡೆದು ಕೂಸು ಬದುಕಬೇಕು ಎಂಬುದು ಪ್ರತಿಯೊಬ್ಬ ತಂದೆ ತಾಯಿ ಪಾಲಕರ ಆಸೆ ಆಗಿರುತ್ತದೆ. ಆಸ್ಪತ್ರೆಗೆ ಯಾರೆ ಬರಲಿ ಅವರೊಂದಿಗೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ನಡೆದುಕೊಳ್ಳಬೇಕು. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು.
ಹೆರಿಗೆಯಂತಹ ಸಂದರ್ಭದಲ್ಲಿ ವಿಳಂಬಕ್ಕೆ ಆವಕಾಶ ಮಾಡಿಕೊಡದೇ ಸಕಾಲಕ್ಕೆ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಎಂಬುದು ಗೊತ್ತಾದಾಗ ವಿಳಂಬ ಮಾಡದೇ ಮೇಲಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಕೂಡಲೇ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರ ನಂಬಿಕೆಯನ್ನು ಉಳಿಸಿಕೊಳ್ಳುವ ಹಾಗೆ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು. ಈ ತಾಯಿ ಮರಣದ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳಿಗಿಂತ, ಖಾಸಗಿ ಆಸ್ಪತ್ರೆಗಳಲ್ಲಿಯೇ ತಾಯಿ ಮರಣಗಳು ಅತೀ ಹೆಚ್ಚಾಗಿ ಸಂಭವಿಸಿವೆ ಎಂಬುದರ ಬಗ್ಗೆ ವಿಶೇಷ ಗಮನ ಹರಿಸಿ ಪರಿಶೀಲನೆ ನಡೆಸಬೇಕು ಎಂದರು.