

11ರಂದು ನಡೆಯಲಿದೆ ಪ್ರತಿಭಟನೆ
ಹೊಸಪೇಟೆ: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರಾಜ್ಯದಲ್ಲಿ ತಕ್ಷಣವೇ ಹಿಂಪಡೆಯುವುದು, ರೈತರ ಸಾಗುವಳಿ ಭೂಮಿಗೆ ವಿದ್ಯುತ್ ಮೀಟರ್ ಅಳವಡಿಕೆ ನಿರ್ಧಾರ ಕೈಬಿಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜ.11 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರದ ಟೌನ್ ರೀಡಿಂಗ್ ರೂಂ ನಿಂದ ಪುನೀತ್ ರಾಜಕುಮಾರ ವೃತ್ತದವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ರೈತರಿಗೆ ಮರಣ ಶಾಸನವಾಗಲಿದ್ದ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದರೂ ರಾಜ್ಯ ಸರ್ಕಾರ ಮೀನ-ಮೇಷ ಎಣಿಸುತ್ತಿದೆ. ಯಾರೂ ಬೇಕಾದರೂ ಕೃಷಿ ಭೂಮಿಗಳನ್ನು ಖರೀದಿಸುವಂತಾಗಿರುವ ಕಾರಣ ಜಮೀನಿನ ಬೆಲೆ ಗಗನಕ್ಕೇರಿವೆ ಎಂದು ಆರೋಪಿಸಿದರು.
ಹವಾಮಾನ ವೈಪತೀತ್ಯ ಮತ್ತಿತರ ಕಾರಣದಿಂದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಬದಲಾಗಿ, ಡಾ.ಸ್ವಾಮಿನಾಥ ವರದಿ ಅನ್ವಯ ವೈಜ್ಞಾನಿಕ ಬೆಲೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ನಗರದ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಬಂದ್ ಆಗಿದ್ದರಿಂದ ಈ ಭಾಗದ ಕಬ್ಬು ಬೆಳೆಗಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಖಾನೆ ಸ್ಥಗಿತಗೊಂಡು 8 ವರ್ಷಗಳು ಕಳೆದಿವೆ. ಕರ್ಖಾನೆ ಬಂದ್ ಮಾಡಿಸುವಲ್ಲಿ ಆನಂದ ಸಿಂಗ್ ಪಾತ್ರದ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಕಾರ್ಖಾನೆ ಬಂದ್ ಮಾಡಲು ತಾವು ಒತ್ತಡ ಹೇರಿಲ್ಲವೆಂದು ಸಚಿವ ಆನಂದ ಸಿಂಗ್ ತಿಳಿಸಿದ್ದರು. ಇತ್ತೀಚೆಗೆ ಸರ್ಕಾರದಿಂದ ಹಂಪಿ ಶುಗರ್ಸ್ ಎಂಬ ಕಾರ್ಖಾನೆ ಮಂಜೂರು ಮಾಡಿಸಿದ್ದಾರೆ. ಅದಕ್ಕೆ ಡಿಸೆಂಬರ್ ಅಂತ್ಯದೊಳಗೆ ಭೂಮಿ ಪೂಜೆ ನೆರವೇರಿಸುವುದಾಗಿ ಸಚಿವರು ಭರವಸೆ ನೀಡಿದ್ದರು. ಇನ್ನೂವರೆಗೆ ಯಾವುದೇ ಪ್ರಕ್ರಿಯೆಗಳಿಲ್ಲ. ಇದು ಚುನಾವಣಾ ಪ್ರೇರಿತ ಎಂಬ ಭಾವನೆ ಮೂಡುತ್ತಿದೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಜಿಲ್ಲಾ ಸಂಚಾಲಕ ಸಣ್ಣಕ್ಕಿ ರುದ್ರಪ್ಪ, ಪ್ರಮುಖರಾದ ಮಲ್ಲಿಕಾರ್ಜುನ, ರೇವಣಸಿದ್ಧಪ್ಪ, ಪಿ.ನಾಗರಾಜ್, ಟಿ.ನಾಗರಾಜ್, ಎಲ್.ಎಸ್. ರುದ್ರಪ್ಪ ಉಪಸ್ಥಿತರಿದ್ದರು.