ಸಾಂಸ್ಕೃತಿಕ ವೈವಿಧ್ಯತೆಗೆ ಸಾಕ್ಷಿಯಾದ ವಸಂತ ವೈಭವ

27 MANJU 10
Published on

ಹೊಸಪೇಟೆ: ಹಂಪಿ ಉತ್ಸವ ನಿಮಿತ್ತ ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಸಂತ ವೈಭವ ಕಲಾ ತಂಡಗಳ ಮೆರವಣಿಗೆ ನಾಡಿನ ಸಾಂಸ್ಕೃತಿಕ ವೈವಿಧ್ಯತೆಗೆ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ಅಂಬಾರಿಯಲ್ಲಿ ತಾಯಿ ಭುವನೇಶ್ವರಿ ದೇವಿಯ ಮೂರ್ತಿ ಹೊತ್ತು ಆನೆ ಲಕ್ಷ್ಮೀ ಕಲಾತಂಡಗಳೊಂದಿಗೆ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು, ವಿಶೇಷವಾಗಿತ್ತು.

ನಾಡಿನ ವಿವಿಧ ಸ್ಥಳ ಹಾಗೂ ನೆರೆ ರಾಜ್ಯಗಳಿಂದ ಆಗಮಿಸಿದ 125 ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಉತ್ಸವದ ಮೆರಗು ಹೆಚ್ಚಿಸಿದವು. ಹಂಪಿ ಉತ್ಸವದ ಕ್ಷಣಗಣನೆ ನಡುವೆ, ಗುರುವಾರ ನಗರದ ವಡಕರಾಯನ ದೇವಸ್ಥಾನದ ಬಳಿ, ವಸಂತ ವೈಭವ ಮೆರವಣಿಗೆಗೆ ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ ಚಾಲನೆ ನೀಡಿ ಮಾತನಾಡಿ, ಹಂಪಿ ಉತ್ಸವದ ಮೆರುಗನ್ನು ವಸಂತ ವೈಭವ ಮೆರವಣಿಗೆ ಇನ್ನಷ್ಟು ಹೆಚ್ಚಿಸಿದೆ. ದೇಶ ಮತ್ತು ರಾಜ್ಯದ ಜನತೆಗೆ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ ನಿಟ್ಟಿನಲ್ಲಿ ಹಂಪಿ ಉತ್ಸವ ಪ್ರಮುಖ ಪಾತ್ರವಹಿಸುತ್ತದೆ. ಉತ್ಸವದ ಮುನ್ನಾದಿನ ವಿವಿಧ ಭಾಗಗಳಿಂದ ಆಗಮಿಸಿರುವ ಕಲಾತಂಡಗಳು ವಸಂತ ವೈಭವ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಮೆರಗನ್ನು ಇನ್ನಷ್ಟು ಹೆಚ್ಚಿಸಿವೆ ಎಂದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಜಿ.ಪಂ. ಸಿಇಒ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಮ್ ಷಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಞ, ಉಪವಿಭಾಗಿಯಾಧಿಕಾರಿ ವಿವೇಕನಂದ, ತಹಸೀಲ್ದಾರ್ ಶೃತಿ ಮಾಳಪ್ಪ ಗೌಡ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗರಂಗಣ್ಣನವರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಗೆ ಸಾಕ್ಷಿಯಾದರು. ಬಳಿಕ ನಗರದ ಮೂರಂಗಡಿಯ ವೃತ್ತದ ಬಳಿ ಶಾಸಕರು, ಗಣ್ಯರು ಅಂಬಾರಿ ಹೊತ್ತ ಆನೆ ಲಕ್ಷ್ಮೀಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆಗೈದರು.

ಮೆರವಣಿಗೆಯಲ್ಲಿ ಕಂಸಾಳೆ, ಪೂಜಾಕುಣಿತ, ಕರಡಿ ಮಜಲು, ಲಂಬಾಣಿ ನೃತ್ಯ, ಚಿಲಿಪಿಲಿ ಗೊಂಬೆ, ಆಲಾಯಿ ಹೆಜ್ಜೆಮೇಳ, ಸೋಮನ ಕುಣಿತ, ಮಹಿಳಾ ವೀರಗಾಸೆ, ಕೊಂಬು ಕಹಳೆ, ಚಂಡೆ ವಾದನ, ಝಾಂಜ್ ಮೇಳ, ಮೋಜಿನ ಗೊಂಬೆ, ಜಗ್ಗಲಿಗಿ, ಖಡ್ಗವರಸೆ, ನವಿಲು ಕುಣಿತ, ಮರಗಾಲು ಬೀಸು, ಕಂಸಾಳೆ, ಸಿಂಧೋಳ ಕುಣಿತ, ಸಮಾಳ ಮತ್ತು ನಂದಿಕೋಲು, ಕುದುರೆ ಕುಣಿತ, ನಾದಸ್ವರ, ಡೊಳ್ಳುಕುಣಿತ, ಕೋಲಾಟ, ಹಗಲು ವೇಷ, ಸಿಂಧೋಳ್ ಕುಣಿತ, ತಾಷಾರಂಡೋಲ್, ಗೊಂದಲಿಗರಹಾಡು, ಗೊರವರ ಕುಣಿತ ಹೀಗೆ ಹಲವಾರು ನೃತ್ಯ ಪ್ರಕಾರಗಳ ಮೆರವಣಿಗೆಯನ್ನ ನೋಡಿ ದೇಶದ ಸಂಸ್ಕೃತಿಯನ್ನು ಜನರು ಕಣ್ತುಂಬಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net