ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಜಾಲರಿ ಅಳವಡಿಕೆ

Hampi shiva temple
ಹಂಪಿಯ ಕೆಳಸ್ತರ ಶಿವದೇಗುಲದ ಗೋಪುರಕ್ಕೆ ಕಬ್ಬಿಣದ ಸಲಾಕೆ ಅಳವಡಿಸಿರುವುದು.
Published on


ಹಂಪಿ ಕೆಲ ಸ್ಮಾರಕಗಳ ಪ್ರವೇಶಕ್ಕೆ ತಡೆ

ಮಂಜುನಾಥ ಅಯ್ಯಸ್ವಾಮಿ


ಹೊಸಪೇಟೆ: ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಸಂಪೂರ್ಣ ಶಿಥಿಲಗೊಂಡಿರುವ ಸಾಲು ಮಂಟಪಗಳು ಸೇರಿ 15 ಕಡೆ ವಿವಿಧ ಸ್ಮಾರಕಗಳಿಗೆ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಾತ್ಕಾಲಿಕ ಭದ್ರತೆ ನೀಡಿದೆ. ಅಲ್ಲದೆ, ಜನರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದು, ಸ್ಮಾರಕಗಳಿಗೆ ಜಾಲರಿ ಅಳವಡಿಸಲಾಗಿದೆ.

ಹಂಪಿಯ ಐತಿಹಾಸಿಕ ಸ್ಮಾರಕಗಳು ಬಿಸಿಲು, ಮಳೆ, ಗಾಳಿಗೆ ನೈಜ ಸ್ವರೂಪ ಕಳೆದುಕೊಳ್ಳುತ್ತಿವೆ. ನೂರಾರು ವರ್ಷಗಳ ಐತಿಹಾಸಿಕ ವಿಗ್ರಹ, ಕೋಟೆ-ಕೊತ್ತಲುಗಳು, ಪುರಾತನ ಮಂಟಪಗಳು ಬೀಳುವ ಸ್ಥಿತಿಯಲ್ಲಿವೆ. ಇವು ನೆಲಕ್ಕುರುಳುವ ಮುನ್ನ ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳು ಯೋಜನೆ ರೂಪಿಸಿ, ಸ್ಮಾರಕಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂಬ ಕೂಗು ಬಲವಾಗಿ ಕೇಳಿ ಬಂದಿತ್ತು. ಆದರೆ,ಭಾರತೀಯ ಪುರಾತತ್ವ ಇಲಾಖೆಯು ಸಾಲು ಮಂಟಪಗಳು ಗಾಳಿ-ಮಳೆಗೆ ಉರುಳಿ ಬಿದ್ದ ಬಳಿಕ ಎಚ್ಚೆತ್ತುಕೊಂಡು ಸ್ಮಾರಕಗಳ ಸಂರಕ್ಷಣೆಗೆ ಆದ್ಯತೆ ನೀಡಿದೆ. ರಥಬೀದಿಯಲ್ಲಿರುವ ಮಂಟಪಗಳು ಸಂಪೂರ್ಣ ಶಿಥಿಲಗೊಂಡಿದ್ದು, ವಾಲುತ್ತಿವೆ. ಯಾವಾಗ ಬೀಳುತ್ತವೆಯೋ ಗೊತ್ತಿಲ್ಲ. ಆದ್ದರಿಂದ ಯಾವುದೇ ಪ್ರಾಣಿ ಹಾನಿಯಾಗದಂತೆ ಮುಂಜಾಗ್ರತಾ ಕ್ರಮವಹಿಸಿರುವ ಅಧಿಕಾರಿಗಳು, ಪ್ರವಾಸಿಗರು ಸೇರಿ ಸ್ಥಳೀಯರಿಗೂ ಸಾಲು ಮಂಟಪಗಳ ಒಳಗೆ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದಾರೆ. ಮಂಟಪಗಳ ಸುತ್ತಮುತ್ತಲೂ ತಿರುಗಾಡದಂತೆ ಕಬ್ಬಿಣದ ಜಾಲರಿಗಳನ್ನು ಅಳವಡಿಸಲಾಗಿದೆ.

ಜೀರ್ಣೋದ್ಧಾರಕ್ಕೆ ಯೋಜನೆ: ಹಂಪಿಯ ದೇಗುಲ, ಮಂಟಪ, ಸ್ಮಾರಕಗಳು ಶಿಥಿಲವಾಗಿದ್ದರೆ, ಗುರುತಿಸುವ ಕಾರ್ಯವನ್ನು ಭಾರತೀಯ ಪುರಾತತ್ವ ಇಲಾಖೆ ಕೈಗೊಂಡಿದೆ. ವಿಜಯನಗರ ಅರಸರ ಕಾಲದ ಸ್ಮಾರಕಗಳನ್ನು ಸಹಜ ಸ್ಥಿತಿಯಲ್ಲಿ ಕಾಪಾಡಬೇಕಾದ ಹೊಣೆಗಾರಿಕೆ ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆ ಮೇಲಿದೆ. ಹಂಪಿಯಲ್ಲೇ ಈ ಇಲಾಖೆಗಳ ಕಚೇರಿಗಳನ್ನು ತೆರೆಯಲಾಗಿದೆ. ಜೀರ್ಣೋದ್ಧಾರಕ್ಕೆ ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಕಬ್ಬಿಣದ ರಾಡ್‌ಗಳ ಆಸರೆ


ಹಂಪಿಯ ನೆಲಸ್ತರದ ಶಿವಾಲಯ ದೇವಾಲಯ ಗೋಪುರ, ಪಾನ್ ಸುಪಾರಿ ಬಜಾರ್‌ನ ಮಂಟಪ, ಗಜಶಾಲೆ ಹಿಂಬದಿಯ ರಂಗ ದೇವಾಲಯ, ಜೈನ ಬಸದಿ, ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ರಥಬೀದಿಯ ಸಾಲು ಮಂಟಪದಲ್ಲಿ ವಾಲಿರುವ ಕೆಲ ಸ್ಮಾರಕಗಳು ಸೇರಿ ಹಂಪಿಯ ವಿವಿಧ ಸ್ಮಾರಕಗಳಿಗೆ ಪುರಾತತ್ವ ಇಲಾಖೆ ಕಬ್ಬಿಣದ ರಾಡ್‌ಗಳನ್ನು ಅಳವಡಿಸಿ ತಕ್ಕಮಟ್ಟಿಗೆ ಆಸರೆ ಒದಗಿಸಿದೆ. ಆದ್ದರಿಂದ ಪ್ರವಾಸಿಗರು ಸ್ಮಾರಕಗಳತ್ತ ಹೋಗದಿರುವುದು ಹಾಗೂ ಮಲಗದಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ನದಿಗೆ ನೀರು ಹರಿಯಲು ಚರಂಡಿ ನಿರ್ಮಾಣ

ಹಂಪಿಯಲ್ಲಿ ಕೆಲ ದಿನಗಳ ಹಿಂದೆ ಮಳೆಯಿಂದ ಸಾಲು ಮಂಟಪಗಳು ಕುಸಿದಿದ್ದವು. ಮಳೆ ಬಂದರೆ ಸಾಕು ವಿರೂಪಾಕ್ಷೇಶ್ವರ ದೇಗುಲದ ಸಾಲು ಮಂಟಪದಲ್ಲಿ ನೀರು ನಿಲ್ಲುತ್ತದೆ. ಇದರಿಂದ ಸ್ಮಾರಕಗಳ ತಳಪಾಯಕ್ಕೆ ಸಮಸ್ಯೆಯಾಗಿದೆ. ಹೀಗಾಗಿ ಕೇಂದ್ರ ಪುರಾತತ್ವ ಅಧಿಕಾರಿಗಳು ಮಳೆ ನೀರು ನೇರವಾಗಿ ನದಿಗೆ ಹರಿದು ಹೋಗುವಂತೆ ವಿರೂಪಾಕ್ಷೇಶ್ವರ ದೇಗುಲದಿಂದ ಸಾಲು ಮಂಟಪದವರೆಗೆ ಅಂದಾಜು ಒಂದು ಕಿಮೀ ಹೊಸದಾಗಿ ಚರಂಡಿ ನಿರ್ಮಾಣಕ್ಕೆ ಮುಂದಾಗಿದ್ದು, ಕಾಮಗಾರಿ ಆರಂಭವಾಗಿದೆ.

ಹಂಪಿಯ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯವನ್ನು ಹಂತ ಹಂತವಾಗಿ ನಡೆಸಲಾಗುವುದು. ಸಂಪೂರ್ಣ ಶಿಥಿಲಗೊಂಡ ಸ್ಮಾರಕಗಳಿಗೆ ಆಸರೆ ಒದಗಿಸಲಾಗುತ್ತಿದೆ. ಮಳೆಯಿಂದ ಕೆಲ ಮಂಟಪಗಳು ಹಾಗೂ ಸ್ಮಾರಕಗಳು ವಾಲಿವೆ. ಆದ್ದರಿಂದ ಕೆಲವೆಡೆ ನಿರ್ಬಂಧ ಹೇರಲಾಗಿದ್ದು, ಪ್ರವಾಸಿಗರು ಸಹಕಾರ ನೀಡಬೇಕು.| ಡಾ.ನಿಹಿಲ್ ದಾಸ್ ಅಧೀಕ್ಷಕ, ಕೇಂದ್ರ ಪುರಾತತ್ವ ಇಲಾಖೆ, ಹಂಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net