

ಹೊಸಪೇಟೆ: ಐತಿಹಾಸಿಕ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಸೋಮವಾರ ರಾತ್ರಿ ಕಾಮಣ್ಣನನ್ನು ದಹಿಸಿ ಸ್ಥಳೀಯರ ಜತೆಗೆ ವಿದೇಶಿಗರು ಸಂಭ್ರಮಿಸಿದರು. ಸ್ಥಳೀಯ ಮಕ್ಕಳನ್ನು ಹೆಗಲ ಮೇಲೆ ಕೂಡಿಸಿಕೊಂಡು ಪಾಶ್ಚತ್ಯ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಕರೊನಾ ವದಂತಿಗೆ ಸ್ಥಳೀಯರು ಕಿವಿಗೂಡದೆ ವಿದೇಶಿಗರೊಂದಿಗೆ ಬೆರೆತು ಪರಸ್ಪರ ಬಣ್ಣ ಎರಚಿದರು.
ಹಂಪಿಯ ಜನತಾ ಪ್ಲಾಟ್, ರಥಬೀದಿ ಸೇರಿ ವಿವಿಧೆಡೆ ಗುಂಪು ಗುಂಪಾಗಿದ್ದ ವಿದೇಶಿ ಮಹಿಳೆಯರು, ಮಕ್ಕಳು ಯುವಕರು ಬಣ್ಣ ಎರಚಿ ಖುಷಿ ಹಂಚಿಕೊಂಡರು. ವಿದೇಶಿಗರು ಹ್ಯಾಪಿ ಹೋಳಿ ಇನ್ ಹಂಪಿ ಎಂದು ಕುಣಿದಾಡಿದರು. ತೇರು ಬೀದಿಯಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಹೋಳಿ ಅಬ್ಬರ ಜೋರಾಗಿತ್ತು.
ವಿಶ್ವದೆಲ್ಲೆಡೆ ಸಾವಿನ ಭಯ ಹುಟ್ಟಿಸಿರುವ ಕರೊನಾಕ್ಕೆ ಸ್ಥಳೀಯರು ಸೇರಿ ವಿದೇಶಿಗರು ಕಿವಿಗೂಡದೆ ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಪ್ರೀತಿ ಸಂಬಂಧಗಳನ್ನು ಗಟ್ಟಿಗೊಳಿಸುವ ಹೋಳಿ ಹಬ್ಬವನ್ನು ವರ್ಷಕ್ಕೊಮ್ಮೆ ಸಂಭ್ರಮದಿಂದ ಆಚರಿಸುತ್ತೇವೆ. ರಾಜ್ಯದಲ್ಲಿ ಕರೊನಾ ಕಾಲಿಟ್ಟಿಲ್ಲ ಎಂದು ಅಧಿಕಾರಿಗಳೆ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಹೋಳಿಯಲ್ಲಿ ಭಾಗವಹಿಸಿದ್ದೇವೆ ಎಂದು ಸ್ಥಳೀಯರು ಹೇಳಿದರು.
ಹಂಪಿಯಲ್ಲಿ ಹೋಳಿ ನಿಷೇಧಿಸುವ ಚಿಂತನೆಯಲ್ಲಿದ್ದ ಅಧಿಕಾರಿಗಳು ವಿನಾಃ ಕಾರಣ ಜನರಲ್ಲಿ ಆತಂಕ ಹೆಚ್ಚುತ್ತದೆ ಎಂಬ ಕಾರಣಕ್ಕೆ ಹೋಳಿ ಆಚರಣೆಗೆ ಅಡ್ಡಿಪಡಿಸಲಿಲ್ಲ. ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.