ವಿಶ್ವವಿಖ್ಯಾತ ಹಂಪಿಯಲ್ಲಿ ಪೊಲೀಸ್ ಕಟ್ಟೆಚ್ಚರ

07 MANJU 01
Published on

ಹೊಸಪೇಟೆ: ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ಭಾರತದ ಪ್ರತಿಕಾರದ ದಾಳಿ ಬೆನ್ನಲ್ಲೇ ವಿಶ್ವವಿಖ್ಯಾತ ಹಂಪಿ, ತುಂಗಭದ್ರಾ ಜಲಾಶಯ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ವಿಜಯನಗರ ಪೊಲೀಸ್ ಇಲಾಖೆಯಿಂದ ಎಲ್ಲೆಡೆ ತಪಾಸಣೆ ನಡೆಸಲಾಗುತ್ತಿದೆ.

ಸದ್ಯ ಎಲ್ಲೆಲ್ಲೂ ಸುಡುಬಿಸಿಲು, ಮಕ್ಕಳಿಗೆ ಬೇಸಿಗೆ ರಜೆ.. ಈ ಹಿನ್ನಲೆಯಲ್ಲಿ ಬಹುತೇಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ವಿಜಯನಗರ ಜಿಲ್ಲೆಗೂ ಸಹ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ವಿಶ್ವವಿಖ್ಯಾತ ಹಂಪಿ, ತುಂಗಭದ್ರಾ ಜಲಾಶಯ, ದರೋಜಿ ಹಾಗೂ ಗುಡೇಕೊಟೆ ಕರಡಿ ಧಾಮ ಸೇರಿದಂತೆ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಮಾಹಿತಿ ಕಲೆ ಹಾಕುತ್ತಿದ್ದು, ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಿ ಬರುವ ಪ್ರವಾಸಿಗರ ಮಾಹಿತಿ ಪಡೆಯಲಾಗುತ್ತಿದೆ.

ವಿಶ್ವವಿಖ್ಯಾತ ಹಂಪಿ ವಿಶ್ವದಲ್ಲೇ ನೋಡಲೇ ಬೇಕಾದ ಸ್ಥಳವಾಗಿದೆ. ದರೋಜಿ ಕರಡಿ ಧಾಮ ಏಷ್ಯಾದಲ್ಲಿಯೇ ಅತಿದೊಡ್ಡ ಕರಡಿಗಳ ತಾಣವಾಗಿದೆ. ವಿಜಯನಗರ ಹಾಗೂ ಬಳ್ಳಾರಿ ಗಡಿಭಾಗದಲ್ಲಿ ವಿದ್ಯುತ್ ಸ್ಥಾವರ ಸಹ ಇದೆ. ತುಂಗಭದ್ರಾ ಜಲಾಶಯ ಇವುಗಳು ನಾಲ್ಕು ಸೂಕ್ಷ್ಮ ಪ್ರದೇಶವಾಗಿವೆ. ಈ ಹಿಂದಿನಿAದಲೂ ನಾಲ್ಕು ಸ್ಥಳದಲ್ಲಿ ಬಿಗಿ ಭದ್ರತೆ ಮಾಡಿಕೊಂಡು ಬರಲಾಗಿದೆ. ಒಂದೊಮ್ಮೆ ಭಾರತ ಪಾಕಿಸ್ತಾನದ ನಡುವೆ ಯುದ್ದ ಆರಂಬವಾಗಿದ್ದು, ಉಗ್ರರು ದೇಶದೊಳಗೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾದರೆ ಈ ಸ್ಥಳದ ಮೇಲೆ ಕಣ್ಣಿಡಬಹುದು ಎಂದು ಮುಂಜಾಗೃತ ಕ್ರಮವಾಗಿ ಜಿಲ್ಲೆಯಲ್ಲಿ ಭದ್ರತೆಗೆ ಪೊಲೀಸ್ ಇಲಾಖೆ ಕಣ್ಣಿಡುವ ಕಾರ್ಯಕ್ಕೆ ಇಳಿದಿದ್ದಾರೆ. ಈಗಾಗಲೇ ಪಹಲ್ಗಾಮ್ ಘಟನೆ ನಂತರದಲ್ಲಿ ಜಿಲ್ಲೆಯ ವಿಜಯನಗರ ಪ್ರವಾಸಿ ತಾಣಗಳಲ್ಲಿ ಚಿತ ಕಾವಲು ಪಡೆ ನಿರಂತರವಾಗಿ ಗಸ್ತು ತಿರುಗುತ್ತಿದ್ದು, ಹಂಪಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರ ಮಾಹಿತಿಯನ್ನ ಸಂಗ್ರಹಿಸಿ, ದಾಖಲೆ ಪರಿಶಿಲನೆ ನಡೆಸುತ್ತಿದೆ.

ಮಫ್ತಿಯಲ್ಲಿ ಪೊಲೀಸರು

ಹಂಪಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆಗಳ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಇನ್ನೂ ಪೊಲೀಸರು ಮಫ್ತಿಯಲ್ಲಿ ತಿರುಗಾಡಿ ಅನುಮಾನಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ. ದೇಶ, ವಿದೇಶಿ ಪ್ರವಾಸಿಗರಿಗೆ ಭದ್ರತೆ ಒದಗಿಸುವುದಕ್ಕಾಗಿ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಲ್ಲೂ ಪೊಲೀಸರು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.

ಸ್ಮಾರಕಗಳಲ್ಲಿ ನಿಗಾ

ಹಂಪಿ, ತುಂಗಭದ್ರಾ ಜಲಾಶಯದ ಬಳಿಯೂ ಪೊಲೀಸರು ಭದ್ರತೆ ಹೆಚ್ಚಿಸಿದ್ದು, ತೀವ್ರ ನಿಗಾವಹಿಸಲು ಉನ್ನತಮಟ್ಟದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇಗುಲ, ಸಾಸಿವೆ ಕಾಳು ಗಣಪತಿ ಮಂಟಪ, ವಿಜಯ ವಿಠಲ ದೇಗುಲ, ಕೋಟೆ ಆಂಜನೇಯ, ಕಡ್ಡಿರಾಂಪುರ ಕ್ರಾಸ್ ಸೇರಿದಂತೆ ಕೆಲ ಪ್ರಮುಖ ಸ್ಮಾರಕಗಳ ಬಳಿಯೂ ಪೊಲೀಸರು ನಿಗಾವಹಿಸಿದ್ದಾರೆ.

ಕಾಶ್ಮೀರದಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಪ್ರಮುಖ ಪ್ರವಾಸಿ ತಾಣ ಹಂಪಿ, ಟಿಬಿಡ್ಯಾಂನಲ್ಲೂ ಪೊಲೀಸರ ಭದ್ರತೆ ಹೆಚ್ಚಿಸಲಾಗಿದೆ. ಇನ್ನೂ ಪಾಕ್ ಮೇಲೆ ಭಾರತದ ಪ್ರತಿಕಾರದ ದಾಳಿ ಹಿನ್ನೆಲೆ ಪ್ರವಾಸಿ ತಾಣಗಳ ಮೇಲೆ ಇನಷ್ಟು ನಿಗಾ ವಹಿಸಲಾಗಿದೆ. - ಬಿ.ಎಲ್.ಶ್ರೀಹರಿಬಾಬು, ಎಸ್ಪಿ ವಿಜಯನಗರ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net