ಮಾತಂಗ ಪರ್ವತ ಅಭಿವೃದ್ಧಿಗೆ ಕ್ರಮ; ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಭರವಸೆ

26092022 Hospet Hampi matanga parvatha
Published on

ಹೊಸಪೇಟೆ: ತಾಲೂಕಿನ ಹಂಪಿಯ ಮಾತಂಗ ಪರ್ವತದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ 6.5 ಕೋಟಿ ರೂ. ಮಂಜೂರು ಮಾಡುವುದಾಗಿ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಭರವಸೆ ನಿಡಿದರು.

ಲೋಕ ಕಲ್ಯಾಣಾರ್ಥ ಹಂಪಿಯ ಮಾತಂಗ ಪರ್ವತದಲ್ಲಿ ಆಯೋಜಿಸಿದ್ದ ರಾಜಮಾತಂಗಿ ಮಹಾಯಜ್ಞ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದ ಮೂಲೆ ಮೂಲೆಗಳಿಂದ ಮಾತಂಗ ಮುನಿ ಹಾಗೂ ಮಾತಂಗಿದೇವಿ ಆಶೀರ್ವಾದ ಪಡೆಯಲು ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಮೂಲಸೌಕರ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಕಲ್ಪಿಸಲಿದ್ದು, ರಾಜ್ಯ ಪುರಾತತ್ವ ಇಲಾಖೆ ಕಾಮಗಾರಿ ಕೈಗೊಳ್ಳಲಿದೆ ಎಂದು ತಿಳಿಸಿದರು.

ಮಾತಂಗ ಪರ್ವತಕ್ಕೆ ಮೆಟ್ಟಿಲು ನಿರ್ಮಾಣ, ಪ್ರವಾಸಿಗರಿಗೆ ನೆರಳಿನ ವ್ಯವಸ್ಥೆ ಸೇರಿ ಮೂಲ ಸೌಕರ್ಯ ಒದಗಿಸಲಾಗುವುದು. ಈ ಕುರಿತು ಸಮಾಜದ ಮುಖಂಡರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ವಿಜಯನಗರ ಕ್ಷೇತ್ರದಿಂದ ಸತತ ಮೂರು ಸಾರ್ವತ್ರಿಕ ಚುನಾವಣೆಯಲ್ಲಿ ಹಾಗೂ ಒಂದು ಉಪ ಚುನಾವಣೆಯಲ್ಲಿ ಗೆದ್ದಿರುವೆ. ಮಾದಿಗ ಸಮಾಜದ ಋಣ ನನ್ನ ಮೇಲಿದ್ದು, ಅವರ ಏಳ್ಗೆಗೆ ತನು, ಮನ, ಧನದ ಸಹಾಯ ಮಾಡುತ್ತಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಗೆ ಕ್ಷೇತ್ರದಲ್ಲಿ ಅನೇಕ ಸ್ಪರ್ಧಾಕಾಂಕ್ಷಿಗಳಿದ್ದಾರೆ. ಅವರಲ್ಲಿ ಯಾರಿಗೆ ವಿಜಯಮಾಲೆ ಎಂಬುದನ್ನು ಶ್ರೀ ಪಂಪಾವಿರೂಪಾಕ್ಷೇಶ್ವರ ಹಾಗೂ ಶ್ರೀ ಭುವನೇಶ್ವರಿ ದೇವಿ ನಿರ್ಧರಿಸುತ್ತಾರೆ ಎಂದರು.

ಕಾಂಗ್ರೆಸ್ ಮುಖಂಡ ರಾಜಶೇಖರ್ ಹಿಟ್ನಾಳ್ ಮಾತನಾಡಿ, ಕರೊನಾ ಕಾಲಘಟ್ಟದಲ್ಲಿ ನಾವೆಲ್ಲರೂ ದೇವರ ಮೊರೆ ಹೋಗಿದ್ದೇವು. ಲೋಕ ಕಲ್ಯಾಣಕ್ಕಾಗಿ ಹೋಮ ಮಾಡಿಸಿರುವುದು ಒಳ್ಳೆಯದೆಂದು ಅಭಿಪ್ರಾಯಪಟ್ಟರು.

ಶ್ರೀ ವಿರೂಪಾಕ್ಷೇಶ್ವರ ರಥಬೀದಿಯಿಂದ ಕುಂಭಮೇಳದ ಭವ್ಯ ಮೆರವಣಿಗೆ ನಡೆಯಿತು. ಮಾತಂಗ ಆಶ್ರಮದ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ತಮಿಳುನಾಡಿನ ನರಸಿಂಹಮೂರ್ತಿ ಆಚಾರ್ಯ ನೇತೃತ್ವದಲ್ಲಿ ರಾಜಮಾತಂಗಿ ಮಹಾಯಜ್ಞ ನೆರವೇರಿತು. ನಗರಸಭೆ ಅಧ್ಯಕ್ಷೆ ಸುಂಕಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಮುಖಂಡರಾದ ವೀರಾಸ್ವಾಮಿ, ಡಿ. ಉಮಾಪತಿ, ಬಸವರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net