

ಶಿಲ್ಪಕಲೆ, ವಾಸ್ತುಶಿಲ್ಪಕ್ಕೆ ಮನಸೋತ ವಿದೇಶಿ ನಾಯಕರು
ವೀರೇಂದ್ರ ನಾಗಲದಿನ್ನಿ
ಹೊಸಪೇಟೆ: ಬರೋಬ್ಬರಿ ಐದು ಶತಮಾನಗಳ ಬಳಿಕ ಹಂಪಿ, ಜಿ-20 ಸಭೆಯಿಂದ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಮಿಂಚಿದೆ. ಸಭೆಗೆ ಆಗಮಿಸಿದ್ದ ಜಿ-20 ಪ್ರತಿನಿಧಿಗಳು ಭಾರತೀಯ ಕಲೆ, ಸಂಸ್ಕೃತಿ, ವಿಜಯನಗರದ ಗತವೈಭವ, ಹಂಪಿಯ ಕಲಾ ವೈಶಿಷ್ಟೃತೆಗೆ ಮಾರು ಹೋಗಿದ್ದಾರೆ.
ಜಿ-20 ಶೃಂಗದ ಭಾಗವಾಗಿ ಜು.9 ರಿಂದ 16ರವರೆಗೆ ನಡೆದ ಎರಡು ಹಂತದ ಸಭೆಗಳಿಗೆ ಹಂಪಿ ಭೂಮಿಕೆಯಾಗಿತ್ತು. ಮೊದಲ ಹಂತದಲ್ಲಿ 3ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪು (ಸಿಡಬ್ಲುೃಸಿ) ಮತ್ತು ಎರಡನೇ ಹಂತದ ಶೆರ್ಪಾ ಸಭೆಗಳು ಭಾನುವಾರ ಸಂಪನ್ನಗೊಂಡಿವೆ. ಸಭೆ ಜಾಗತಿಕ ಮಟ್ಟದಲ್ಲಿ ಗಂಭೀರ ವಿಷಯಗಳ ಚರ್ಚೆಗೆ ವೇದಿಕೆಯಾಗಿತ್ತು. ಜತೆಗೆ ಜಿ-20 ಪ್ರತಿನಿಧಿಗಳಿಗೆ ಕರಕುಶಲ ವಸ್ತುಗಳ ಪ್ರದರ್ಶನ, ಸಂಗೀತ, ವೈಭವೋಪೇತ ವಾಸ್ತು ಶಿಲ್ಪದ ಅನುಭೂತಿ ನೀಡಿದೆ.
ಅಚ್ಚರಿ ಮೂಡಿಸಿದ ಸಂಗೀತ ಮಂಟಪ: ಜಿ-20 ಸಭೆ ಸಿಡಬ್ಲುೃಸಿಗಾಗಿ 19 ರಾಷ್ಟ್ರಗಳ 210 ಪ್ರತಿನಿಧಿಗಳು ಭಾಗವಹಿಸಿದ್ದರೆ, ಶೆರ್ಪಾ ಸಭೆಗಾಗಿ 120ಕ್ಕೂ ಹೆಚ್ಚು ಪ್ರತಿನಿಧಿಗಳು ಹಂಪಿಗೆ ಆಗಮಿಸಿದ್ದರು. ದಿನವಿಡೀ ಮ್ಯಾರಾಥಾನ್ ಸಭೆಗಳಲ್ಲಿ ಪಾಲ್ಗೊಂಡು ದಣಿದಿದ್ದ ವಿದೇಶಿ ಗಣ್ಯರಿಗೆ ಸಂಜೆ ಹಂಪಿ ಪರಿಸರದಲ್ಲಿನ ಸ್ಮಾರಕಗಳಿಗೆ ಭೇಟಿ, ಮನೋರಂಜನೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಹಾನವಮಿ ದಿಬ್ಬಕ್ಕೆ ಭೇಟಿ ನಿಡಿದ್ದ ವಿದೇಶಿ ಗಣ್ಯರು, ದಿಬ್ಬದ ಸುತ್ತಲೂ ಕೆತ್ತಿರುವ ಆಕರ್ಷಕ ಉಬ್ಬು ಶಿಲೆಗಳನ್ನು ಕಂಡು ಬೆರಗಾದರು. ಹತ್ತಿರದಲ್ಲಿರುವ ಪುಷ್ಕರಣಿ ಕಂಡು ಆಗಿನ ಕಾಲದಲ್ಲೇ ಇದ್ದ ನೀರು ಸರಬರಾಜು ವ್ಯವಸ್ಥೆಯ ಮಾಹಿತಿ ಪಡೆದು ಆಶ್ಚರ್ಯ ವ್ಯಕ್ತಪಡಿಸಿದರು. ರಾಜ ಸಭಾಂಗಣ, ನೆಲಸ್ತರದ ಕೋಣೆ, ಹಜಾರ ರಾಮಚಂದ್ರ ದೇವಾಲಯ ವೀಕ್ಷಿಸಿದರು. ಗಜಶಾಲೆ, ಲೋಟಸ್ ಮಹಲ್‌ಗೆ ಭೇಟಿ ನೀಡಿ, ಬೃಹತ್ ಕಟ್ಟಡಗಳು, ವಿಜಯವಿಠ್ಠಲ ದೇವಸ್ಥಾನದ ಸಂಗೀತ ಮಂಟಪದಲ್ಲಿ ಪ್ರವಾಸಿ ಮಾರ್ಗದರ್ಶಕರು ಕೈಯಿಂದ ಕಂಬಗಳನ್ನು ತಟ್ಟುತ್ತಿದ್ದಂತೆ ಹೊರ ಹೊಮ್ಮಿದ ಸಪ್ತ ಸ್ವರಗಳ ನಾದಕ್ಕೆ ‘ವಾವ್ಹ್ ಇಟ್ಸ್ ಅಮೇಜಿಂಗ್’ ಎಂದು ಹರ್ಷೋದ್ಗಾರ ತೆಗೆದರು. ಮೊಬೈಲ್‌ಗಳಲ್ಲಿ ಅಪರೂಪದ ಸನ್ನಿವೇಶ ಸೆರೆಹಿಡಿದು ಖುಷಿ ಪಟ್ಟರು. ವಿಜಯ ವಿಠ್ಠ ದೇವಸ್ಥಾನ, ಎದುರು ಬಸವಣ್ಣ ಬಳಿ ಧ್ವನಿ ಬೆಳಕಿನ ಕಾರ್ಯಕ್ರಮದ ವಿಜಯನಗರ ಸಾಮ್ರಾಜ್ಯದ ಗತವೈಭವ ಕಣ್ತುಂಬಿಕೊಂಡರು. ಒಟ್ಟಾರೆ ಜಿ-20 ಶೃಂಗ ಹಂಪಿಗೆ ಆಗಮಿಸಿದ್ದ ವಿದೇಶಿ ಅತಿಥಿಗಳಿಗೆ ಹೆಜ್ಜೆ ಹೆಜ್ಜೆಗೂ ಸಾಂಸ್ಕೃತಿಕ ರಸದೌತಣ ನೀಡುವಲ್ಲಿ ಯಶಸ್ವಿಯಾಗಿದೆ.
ತೆಪ್ಪದಲ್ಲಿ ಪ್ರಯಾಣ ಅದ್ಭುತ : ಹಂಪಿಯ ಕೋದಂಡ ರಾಮದೇವಸ್ಥಾನದ ಸಮೀಪದ ತುಂಗಭದ್ರಾ ನದಿಯಲ್ಲಿ ಏರ್ಪಡಿಸಿದ್ದ ಕೋರಾಕಲ್ ರೈಡ್ ವಿದೇಶಿ ಗಣ್ಯರಿಗೆ ಮಜಾ ಎನಿಸಿತು. ಬೃಹತ್ ಬೆಟ್ಟದ ಮಧ್ಯೆ ಸಾಗುವ ನದಿಯಲ್ಲಿ ತೆಪ್ಪದ ಪ್ರಯಾಣ ಹಿತವಾಗಿತ್ತು. ಹಲವೆಡೆ ಇಕ್ಕಟ್ಟಾದ ಕಲ್ಲು ಬಂಡೆಗಳ ಮಧ್ಯೆ ಲೀಲಾಜಾಲವಾಗಿ ತೇಲುತ್ತಿದ್ದ ತೆಪ್ಪಗಳಲ್ಲಿ ವಿಹರಿಸಿದ ಜಿ-20 ಪ್ರತಿನಿಧಿಗಳಿಗೆ ಹೊಸ ಅನುಭವ ನೀಡಿತು. ಇಲ್ಲಿನ ದೋಣಿ ವಿಹಾರ ಅದ್ಭುತ, ಸ್ಮರಣೀಯ ಎಂದು ಅನೇಕ ಗಣ್ಯರು ಸಂತಸ ಹಂಚಿಕೊಂಡಿದ್ದಾರೆ.
ನದಿ ತಟದಲ್ಲಿ ಯೋಗ ಶಿಬಿರ: ಜಿ-2 ಸಭೆಗೆ ಆಗಮಿಸಿದ್ದ ವಿದೇಶಿಗರಿಗೆ ಭಾರತೀಯ ಕಲೆ, ಸಂಸ್ಕೃತಿಯ ಜತೆಗೆ ಯೋಗ ಶಿಬಿರ ಆಯೋಜಿಸುವ ಮೂಲಕ ಗಮನ ಸೆಳೆಯಲಾಯಿತು. ಸಭೆಯ ಕೊನೆಯ ದಿನ ಜಿ-20 ಪ್ರತಿನಿಧಿಗಳಿಗೆ ಐತಿಹಾಸಿಕ ಹಜಾರರಾಮ ದೇವಸ್ಥಾನ ಹಾಗೂ ಪುರಂದರ ಮಂಟಪದ ಬಳಿ ತುಂಗಭದ್ರಾ ನದಿ ತಟದಲ್ಲಿ ಯೋಗ ಶಿಬಿರ ಹಮ್ಮಿಕೊಳ್ಳುವ ಮೂಲಕ ಭಾರತೀಯ ಜೀವನ ಪದ್ಧತಿ ಪರಿಚಯಿಸಿದ್ದು ವಿಶೇಷ.
ಸಂಗೀತ, ನೃತ್ಯಕ್ಕೆ ಮಂತ್ರಮುಗ್ಧ: ಕೌಸಲ್ಯ ರೆಡ್ಡಿ ನೇತೃತ್ವದ ರಾಧಾ ಮತ್ತು ರಾಜಾ ರೆಡ್ಡಿ ಗುರುಗಳ ತಂಡಗಳು ಪ್ರದರ್ಶಿಸಿದ ತಮಿಳುನಾಡಿನ ಭರತನಾಟ್ಯಂ, ಕೇರಳದಿಂದ ಮೋಹಿನಿಯಾಟ್ಟಂ, ಆಂಧ್ರಪ್ರದೇಶದ ಕೂಚುಪುಡಿ ಮತ್ತು ಒಡಿಶಾದ ಒಡಿಸ್ಸಿ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ವಿಭಿನ್ನ ಶೈಲಿಯ ಅದ್ಭುತ ಪ್ರದರ್ಶನ ಪ್ರತಿನಿಧಿಗಳನ್ನು ಮಂತ್ರಮುಗ್ಧರನ್ನಾಗಿಸಿತು. ಘಟಂ ಅನ್ನು ಶಾಸ್ತ್ರೀಯ ಸಂಗೀತದ ಪ್ರಮುಖ ಭಾಗವನ್ನಾಗಿಸಿ ವಿಶ್ವ ಸಂಗೀತಗಾರರ ಜತೆಗಿನ ಫ್ಯೂಷನ್ ಸಂಗೀತ ಕಾರ್ಯಕ್ರಮಗಳ ಮೂಲಕ ವಿಶ್ವ ವೇದಿಕೆಗೆ ಕೊಂಡೊಯ್ದ ಖ್ಯಾತ ಸಂಗೀತಗಾರ ವಿಕ್ಕು ವಿನಾಯಕರಾಮ್ ತಾಳವಾದ್ಯವನ್ನು ಪ್ರತಿನಿಧಿಗಳು ಆಲಿಸಿ ಆನಂದಿಸಿದರು.
ನಾನು 20ಕ್ಕೂ ಹೆಚ್ಚು ಬಾರಿ ಹಂಪಿ ಪ್ರವಾಸ ಕೈಗೊಂಡಿದ್ದೇನೆ. ಆದರೆ, ಈ ಬಾರಿ ಧ್ವನಿ-ಬೆಳಕು ಕಾರ್ಯಕ್ರಮ, ಹಂಪಿ ಬೈ ನೈಟ್ ಹಾಗೂ ಮೂಲ ಸೌಕರ್ಯಗಳ ಉನ್ನತೀಕರಣದಿಂದಾಗಿ ಮನ ಸೆಳೆದಿದೆ. ಹಂಪಿಗಿಂತ ಮಿಗಿಲಾದ ಪ್ರವಾಸಿ ತಾಣ ಮತ್ತೊಂದಿಲ್ಲ ಎನ್ನುವಂತಾಗಿದೆ. ಇಲ್ಲಿನ ಕಲಾ ವೈಶಿಷ್ಟ್ಯ, ಶಿಲ್ಪಕಲೆ, ಶ್ರೀಮಂತ ಇತಿಹಾಸದಿಂದ ಅತಿಥಿಗಳಲ್ಲಿ ಸಂತಸ ಮೂಡಿದೆ.| ಅಮಿತಾಬ್ ಕಾಂತ್ ಭಾರತೀಯ ಶೆರ್ಪಾ ಹಂಪಿಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದೇನೆ. ಇಲ್ಲಿನ ಸ್ಮಾರಕಗಳು, ಪಾರಂಪರಿಕ ಕಟ್ಟಡಗಳನ್ನು ವರ್ಣಿಸಲಾಗದು. ಜಿ-20 ಶೆರ್ಪಾ ಸಭೆಗೆ ಅದ್ಭುತ ತಾಣವನ್ನು ಆಯ್ಕೆ ಮಾಡಿರುವ ಭಾರತ ಸರ್ಕಾರದ ಕ್ರಮ ಅಭಿನಂದನೀಯ.|ಎಮಿಲ್ ಲೆವೆಂಡುಗುಲು ಜಿ-20 ಯುಕೆ ಪ್ರತಿನಿಧಿ